ಲಖನೌ: 2017 ರ ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋದ ವಿಶೇಷ NIA ನ್ಯಾಯಾಲಯವು ಏಳು ಭಯೋತ್ಪಾದಕರಿಗೆ ಮರಣದಂಡನೆ ಮತ್ತು ಒಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನಿಷೇಧಿತ ಐಎಸ್ ಸಂಘಟನೆಯ ಭಯೋತ್ಪಾದಕ ಮೊಹಮ್ಮದ್ ಫೈಸಲ್, ಆಸಿಫ್ ಇಕ್ಬಾಲ್ ಅಲಿಯಾಸ್ ರಾಕಿ, ಸೈಯದ್ ಮೀರ್ ಹುಸೇನ್, ಮೊಹಮ್ಮದ್ ದಾನಿಶ್, ಅತೀಫ್ ಮುಜಾಫರ್, ಮೊಹಮ್ಮದ್ ಅಜರ್, ಗೌಸ್ ಮೊಹಮ್ಮದ್ ಖಾನ್ ಮರಣದಂಡನೆ ನೀಡಲಾಗಿದೆ. ಅತೀಫ್ ಅಲಿಯಾಸ್ ಜುರಾನ್ ಆತಿಫ್ ಇರಾನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ತೀರ್ಪು ನೀಡುವ ವೇಳೆ ಐಎಸ್ ಸಂಘಟನೆಯ ಎಂಟು ಭಯೋತ್ಪಾದಕರು ನ್ಯಾಯಾಲಯದಲ್ಲಿ ಹಾಜರಿದ್ದರು. ರಾತ್ರಿ 8 ಗಂಟೆಗೆ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. ರೈಲು ಸ್ಫೋಟದಲ್ಲಿ ಒಂಬತ್ತು ಮಂದಿ ಉಗ್ರರು ಭಾಗಿಯಾಗಿದ್ದರು. ಸೈಫುಲ್ಲಾ ಎಂಬಾತ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ.
ಎನ್ಐಎ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಈ ಭಯೋತ್ಪಾದಕರು ದೇಶದ ವಿರುದ್ಧ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದಲ್ಲದೇ, ಹಣ, ಭಾರಿ ಸ್ಫೋಟಕ ವಸ್ತು ಮತ್ತು ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಲಾಗಿದೆ. ಉಗ್ರವಾದಿ ಝಾಕಿರ್ ನಾಯ್ಕ್ ವಿಡಿಯೋ ತೋರಿಸಿ ಯುವಕರನ್ನು ಜಿಹಾದ್‌ಗೆ ಪ್ರಚೋದಿಸಲಾಗುತ್ತಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ.
ರೈಲು ಸ್ಪೋಟ ಪ್ರಕರಣ: ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲು (59320) ಮಾರ್ಚ್ 7, 2017 ರಂದು ಭೋಪಾಲ್ ನಿಲ್ದಾಣದಿಂದ ಬೆಳಿಗ್ಗೆ 6:25 ಕ್ಕೆ ಹೊರಟಿತ್ತು. ಬೆಳಿಗ್ಗೆ 9.38ಕ್ಕೆ ಜಾಬ್ರಿ ರೈಲು ನಿಲ್ದಾಣದ ಬಳಿ ಶಾಜಾಪುರ ಜಿಲ್ಲೆಯ ಕಲಾಪಿಪಾಲ್ ಬಳಿ ರೈಲಿನಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂಓದಿ: ಖಲಿಸ್ತಾನಿ ಉಗ್ರರೊಂದಿಗೆ ಅಪರಾಧಿಗಳು, ದರೋಡೆಕೋರರ ಒಡನಾಟ!