ಪುಣೆ (ಮಹಾರಾಷ್ಟ್ರ): ದೇಶದ ಕೋವಿಡ್ ಲಸಿಕೆ ತಯಾರಿಕಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸುರೇಶ್ ಜಾಧವ್(72) ಅವರು ಪುಣೆಯಲ್ಲಿ ಬುಧವಾರ ನಿಧನ ಹೊಂದಿದ್ದಾರೆ. ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಜಾಧವ್ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸೀರಮ್ ಇನ್‌ಸ್ಟಿಟ್ಯೂಟ್ ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಲ್ಲಿ ಒಂದಾಗಿದ್ದು, 140ಕ್ಕೂ ಹೆಚ್ಚು ದೇಶಗಳಿಗೆ ಸೇವೆ ಸಲ್ಲಿಸುತ್ತಿದೆ. ಡಾ.ಜಾಧವ್ ಅವರು ಎಂ.ಫಾರಂ ನಂತರ ನಾಗಪುರ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಪದವಿ ಪಡೆದಿದ್ದರು. 1979ರಲ್ಲಿ ಪುಣೆಯ ಸೀರಮ್ ಸಂಸ್ಥೆ ಸೇರಿದ್ದ ಅವರು 1992ರಿಂದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ತಾಂತ್ರಿಕ ಸಾಮರ್ಥ್ಯವನ್ನು ಉನ್ನತೀಕರಿಸುವಲ್ಲಿ ಜಾಧವ್ ಅವರ ಮಹತ್ವದ್ದಾಗಿದೆ.
ಎಸ್‌ಐಐ ಸಿಇಒ ಅದಾರ್ ಪೂನವಾಲಾ ಅವರು ಜಾಧವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪೂನಾವಾಲಾ, ಡಾ. ಸುರೇಶ್ ಜಾಧವ್ ಅವರ ನಿಧನದಿಂದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕುಟುಂಬ ಮತ್ತು ಭಾರತೀಯ ಲಸಿಕೆ ಉದ್ಯಮವು ಮಾರ್ಗದರ್ಶಿ ಬೆಳಕನ್ನು ಕಳೆದುಕೊಂಡಿದೆ. ಈ ಸಮಯದಲ್ಲಿ ಅವರ ಕುಟುಂಬದವರಿಗೆ ಸಂತಾಪ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಕೂಡ ಜಾಧವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದೊಂದು ಬಹಳ ದುಃಖದ ಸುದ್ದಿ. ಜನರ ಜೀವ ಉಳಿಸುವ ಲಸಿಕೆ ಅಭಿವೃದ್ಧಿಯು ಜೀವಮಾನದ ಅಸಾಧಾರಣ ಕೊಡುಗೆಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸ್ವಾಮಿನಾಥನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ವಿಧಿವಶ!