ಚೆನ್ನೈ, ತಮಿಳುನಾಡು: ಜಾರಿ ಇಲಾಖೆಯಿಂದ ಬಂಧನಕ್ಕೊಳಗಾಗಿರುವ ಸಚಿವ ಸೆಂಥಿಲ್ ಬಾಲಾಜಿ ಎದೆನೋವಿನಿಂದಾಗಿ ಚೆನ್ನೈನ ಆಳ್ವಾರ್ ಪೇಟೆಯ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಸಚಿವ ಸೆಂಥಿಲ್ ಬಾಲಾಜಿ ಅವರಿಗೆ ನೀಡಲಾಗಿದ್ದ ವಿದ್ಯುತ್, ಇಂಧನ ಮತ್ತು ಅಬಕಾರಿ ಖಾತೆಗಳನ್ನು ಹೊಂದಿದ್ದರು. ಈಗ ಅವರ ಖಾತೆಗಳನ್ನು ಇಬ್ಬರು ಸಚಿವರಿಗೆ ಹಸ್ತಾಂತರಿಸಲಾಗಿದೆ.
ನಿನ್ನೆ (ಜೂನ್ 16) ತಮಿಳುನಾಡು ಸರ್ಕಾರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮುತ್ತುಸಾಮಿ ಅವರಿಗೆ ಅಬಕಾರಿ ಇಲಾಖೆ ಖಾತೆಯನ್ನು ನೀಡಿದ್ರೆ, ವಿದ್ಯುತ್ ಖಾತೆಯನ್ನು ವಿತ್ತ ಸಚಿವ ತಂಗಂ ತೆನ್ನರಸು ಅವರಿಗೆ ನೀಡಿ ಆದೇಶಿಸಿದೆ. ಅಷ್ಟೇ ಅಲ್ಲ, ಸೆಂಥಿಲ್ ಬಾಲಾಜಿಗೆ ಖಾತೆ ಇಲ್ಲದೇ ಸಚಿವರಾಗಿ ಮುಂದುವರಿಯುವಂತೆಯೂ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.
ಇದಕ್ಕೂ ಮುನ್ನ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಪೊನ್ಮುಡಿ, ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಪದಚ್ಯುತಗೊಳಿಸುವಂತೆ ರಾಜ್ಯಪಾಲರು ಮೇ 31ರಂದು ಪತ್ರ ಬರೆದಿದ್ದರು. ಈ ಪತ್ರವನ್ನು ಸ್ವೀಕರಿಸಿದ ಮರು ದಿನವೇ ಮುಖ್ಯಮಂತ್ರಿಗಳು ಜೂನ್ 1ರಂದು ಇದಕ್ಕೆ ಸ್ಪಷ್ಟ ಕಾನೂನು ಕಾರಣಗಳನ್ನು ವಿವರಿಸಿ ರಾಜ್ಯಪಾಲರಿಗೆ ಉತ್ತರ ಬರೆದಿದ್ದರು.
ಆ ಪತ್ರದಲ್ಲಿ ರಾಜ್ಯಪಾಲರ ಪತ್ರ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಗೆ ಮಾತ್ರ ಸಚಿವರನ್ನು ನೇಮಿಸುವ ಅಥವಾ ತೆಗೆದುಹಾಕುವ ಅಧಿಕಾರವಿದೆ ಎಂದು ಹೇಳಲಾಗಿದೆ ಅಂತಾ ಸಚಿವ ಪೊನ್ಮುಡಿ ಹೇಳಿದರು.
ಇದಲ್ಲದೇ ಭಾರತದ ಸಂವಿಧಾನದ ಪ್ರಕಾರ, ಸಚಿವರ ಜವಾಬ್ದಾರಿಗಳನ್ನು ಬದಲಾಯಿಸುವ ಅಧಿಕಾರ ಮುಖ್ಯಮಂತ್ರಿಗೆ ಮಾತ್ರ ಇದೆ. ಅನಗತ್ಯವಾಗಿ, ಇದು ರಾಜ್ಯ ಸರ್ಕಾರದ ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಮತ್ತು ಅಸಾಂವಿಧಾನಿಕ ಎಂದು ಪತ್ರದಲ್ಲಿ ಸಿಎಂ ಉಲ್ಲೇಖಿಸಿದ್ದಾರೆ ಅಂತಾ ಸಚಿವ ಪೊನ್ಮುಡಿ ಹೇಳಿದರು.
ಈ ಪತ್ರದ ಬೆನ್ನಲ್ಲೇ ನಿನ್ನೆ(ಜೂ.16) ರಾಜ್ಯಪಾಲರ ಭವನವು, ಸಚಿವ ಸೆಂಥಿಲ್ ಬಾಲಾಜಿ ಆರೋಗ್ಯ ಹದಗೆಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಬಾಕಿ ಇದೆ. ಹೀಗಾಗಿ ಸಚಿವ ಸಂಪುಟದಲ್ಲಿ ಸೆಂಥಿಲ್ ಬಾಲಾಜಿ ಮುಂದುವರಿಯಲು ಅವಕಾಶ ನೀಡುವಂತಿಲ್ಲ. ಈಗ ಅವರು ನ್ಯಾಯಾಲಯದ ವಶದಲ್ಲಿದ್ದಾರೆ ಎಂದು ಸಿಎಂ ಸ್ಟಾಲಿನ್ಗೆ ಹೇಳಿದೆ.
ಓದಿ: ಸಿಬಿಐ ತನಿಖೆಗೂ ಮುನ್ನ ತಮಿಳುನಾಡು ಸರ್ಕಾರದ ಅನುಮತಿ ಕಡ್ಡಾಯ: ಸಿಎಂ ಸ್ಟಾಲಿನ್
ಆಸ್ಪತ್ರೆಯಲ್ಲಿ ಸಚಿವ ಸೆಂಥಿಲ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ( ಇಡಿ ) ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ವಶಕ್ಕೆ ಪಡೆದಿತ್ತು. ತನಿಖಾ ಸಂಸ್ಥೆ ಮಂಗಳವಾರ ಡಿಎಂಕೆ ನಾಯಕನ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಅವರನ್ನು ವಿಚಾರಣೆಗೆ ಕರೆದೊಯ್ಯುತ್ತಿತ್ತು. ಬಳಿಕ ಇಡಿ ಬಿಗಿ ಭದ್ರತೆಯ ನಡುವೆ ಬಾಲಾಜಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿತ್ತು. ಆದ್ರೆ ಡಿಎಂಕೆ ನಾಯಕನನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆಯೇ ಆಸ್ಪತ್ರೆಯ ಹೊರಗೆ ಭಾರಿ ಹೈಡ್ರಾಮ ಕೂಡಾ ನಡೆದಿದೆ. ಇಡಿ ಕ್ರಮವನ್ನು ವಿರೋಧಿಸಿ ಅವರ ಬೆಂಬಲಿಗರು ಅಲ್ಲಿ ಜಮಾಯಿಸಿದರು. ಆಗ ಕಾರಿನಲ್ಲಿ ಮಲಗಿದ್ದ ಸೆಂಥಿಲ್ ಬಾಲಾಜಿ ಎದೆನೋವು ಎಂದು ಅಳುತ್ತಿರುವುದನ್ನು ಕಂಡರು. ಬಳಿಕ ಸೆಂಥಿಲ್ ಬಾಲಾಜಿಯನ್ನು ಆಸ್ಪತ್ರೆಯ ಐಸಿಯುವಿಗೆ ದಾಖಲಿಸಲಾಯಿತು.