ವಿಶಾಖಪಟ್ಟಣಂ(ಆಂಧ್ರಪ್ರದೇಶ): ಬಿಜೆಪಿ ಹಿರಿಯ ನಾಯಕ ಮತ್ತು ಆಂಧ್ರ ಪ್ರದೇಶದ ಮಾಜಿ ವಿಧಾನ ಪರಿಷತ್ ಸದಸ್ಯ ಪಿ.ವಿ.ಚಲಪತಿ ರಾವ್(87) ಅವರು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರರನ್ನು ಇವರು ಅಗಲಿದ್ದಾರೆ.
ಪ್ರಧಾನಿ ಮೋದಿ ಸಂತಾಪ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಚಲಪತಿ ರಾವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತಮ್ಮ ಟ್ವೀಟ್, 'ಅತ್ಯುತ್ತಮ ಸೇವೆ ಮತ್ತು ರಾಷ್ಟ್ರಭಕ್ತಿಯ ಉತ್ಸಾಹಕ್ಕಾಗಿ ಚಲಪತಿ ರಾವ್ ಅವರನ್ನು ಸದಾ ಸ್ಮರಿಸಲಾಗುವುದು. ಅಸಂಖ್ಯಾತ ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿರುತ್ತಾರೆ. ಅವರ ನಿಧನ ನೋವುಂಟು ಮಾಡಿದೆ. ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು' ಎಂದು ಗೌರವ ನಮನ ಸಲ್ಲಿಸಿದ್ದಾರೆ.
ಚಲಪತಿ ರಾವ್ ರಾಜಕೀಯ ಜೀವನ: ಜೂನ್ 26, 1935 ರಂದು ಜನಿಸಿದ ಚಲಪತಿ ರಾವ್ ತಮ್ಮ ಸರ್ಕಾರಿ ನೌಕರಿ ಬಿಟ್ಟು ವಕೀಲ ವೃತ್ತಿಯನ್ನು ಆಯ್ದುಕೊಂಡರು. 1967-1968 ರ ವಿಶಾಖ ಸ್ಟೀಲ್ ಪ್ಲಾಂಟ್ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 1969ರಲ್ಲಿ ಗೋದಾವರಿ ನದಿಯ ಪೋಲಾವರಂ ಯೋಜನೆ ನಿರ್ಮಾಣಕ್ಕಾಗಿ ಚಳವಳಿ ಸಂಘಟಿಸಿದ್ದರು. 1970 ರಲ್ಲಿ ವಕೀಲಿಕೆಯನ್ನು ಸಂಪೂರ್ಣ ತೊರೆದು ಜನಸಂಘದ ಪೂರ್ಣಾವಧಿ ಕಾರ್ಯಕರ್ತರಾದರು.
ನಂತರದಲ್ಲಿ, 1972 ರಿಂದ 1973 ರವರೆಗೆ ನಡೆದ ಪ್ರತ್ಯೇಕ ಆಂಧ್ರ ಚಳುವಳಿಯನ್ನು ಮುನ್ನಡೆಸಿದ್ದಾರೆ. ಅದಕ್ಕಾಗಿಯೇ ಹಲವು ಬಾರಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದರು. 1970 ರಿಂದ 1974 ರವರೆಗೆ ಕರಾವಳಿ ಪ್ರದೇಶಗಳ ಸುಮಾರು 40ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮನ್ನಡೆಸುತ್ತಿರುವ ವಿದ್ಯಾಕೇಂದ್ರದ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 1974ರಲ್ಲಿ ಉತ್ತರ ಸರ್ಕಾರ್ ಜಿಲ್ಲೆಗಳ ಪದವೀಧರ ಕ್ಷೇತ್ರದಿಂದ ಆಂಧ್ರ ಪ್ರದೇಶದ ವಿಧಾನ ಪರಿಷತ್ತಿನ (ಎಂಎಲ್ಸಿ) ಸದಸ್ಯರಾಗಿ ಚುನಾಯಿತರಾದರು. 1980ರಲ್ಲಿ ಅದೇ ಕ್ಷೇತ್ರದಿಂದ ಮರು ಆಯ್ಕೆಗೊಂಡಿದ್ದಾರೆ. ಅಲ್ಲದೇ ಆಂಧ್ರ ಪ್ರದೇಶ ಲೆಜಿಸ್ಲೇಟಿವ್ ಕೌನ್ಸಿಲ್ ರದ್ದುಪಡಿಸುವವರೆಗೆ ಅಂದರೆ 1986 ರವರೆಗೆ ಇವರು ಅಧಿಕಾರದಲ್ಲಿದ್ದರು.
ಇದನ್ನೂ ಓದಿ: ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ನರೇಂದ್ರ ಚಂದ್ರ ನಿಧನ
1978 ರಲ್ಲಿ ವಿಶಾಖಪಟ್ಟಣಂನಲ್ಲಿ 14 ದಿನಗಳ ಕಾಲ ಬಿಎಚ್ಪಿವಿನಲ್ಲಿ ಕಾರ್ಮಿಕರ ಪರವಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಇದು 500ಕ್ಕೂ ಹೆಚ್ಚು ಕಾರ್ಮಿಕರ ಉದ್ಯೋಗಗಳನ್ನು ಖಾಯಂ ಮಾಡಲು ಕಾರಣವಾಯಿತು. ಅಲ್ಲದೇ ಇವರ ನಿರಂತರ ಪ್ರಯತ್ನದಿಂದ ಸುಮಾರು 1,200 ಕ್ಕೂ ಹೆಚ್ಚು ಕಾರ್ಮಿಕರನ್ನು ಎಂಇಎಸ್‌ನಲ್ಲಿ ಖಾಯಂ ಮಾಡಲಾಗಿತ್ತು.
ಬಳಿಕ ಸರ್ಕಾರದಲ್ಲಿ ಟ್ರೇಡ್ ಯೂನಿಯನ್ ಅಧ್ಯಕ್ಷರಾಗಿ ಮತ್ತು ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1980 ರಿಂದ 1986 ರವರೆಗೆ ಬಿಜೆಪಿಯ ಆಂಧ್ರ ಪ್ರದೇಶ ಯೂನಿಯನ್‌ನ ಮೊದಲ ಅಧ್ಯಕ್ಷರಾಗಿದ್ದರು. 1981 ರಲ್ಲಿ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಮೊದಲ ಮೇಯರ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1999 ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ಟಿಡಿಪಿ ಕಾರ್ಯಕ್ರಮದಲ್ಲಿ ಮತ್ತೊಂದು ದುರಂತ: ಕಾಲ್ತುಳಿತದಲ್ಲಿ ಮೂವರು ಮಹಿಳೆಯರ ಸಾವು