ವಯನಾಡ್ (ಕೇರಳ): ಕೇರಳದ ವಯನಾಡ್ ಜಿಲ್ಲೆಯ ಬನಾಸುರಾ ಪರ್ವತ ಪ್ರದೇಶದಲ್ಲಿ ನಡೆದ ಪೊಲೀಸ್ - ಮಾವೋವಾದಿ ಘರ್ಷಣೆಯ ಬಳಿಕ ತಪ್ಪಿಸಿಕೊಂಡಿದ್ದ ಶಂಕಿತ ನಕ್ಸಲರನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಮಂಗಳವಾರ ಬೆಳಗ್ಗೆ ಪೊಲೀಸರು ಹಾಗೂ ನಕ್ಸಲ್ ತಂಡದ ಸದಸ್ಯರ ನಡುವೆ ನಡೆದ ಚಕಮಕಿಯಲ್ಲಿ, ಶಂಕಿತ ನಕ್ಸಲ್ ವೆಲ್ಮುರುಗನ್ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾಗಿದ್ದಾನೆ.
ಘಟನಾ ಸ್ಥಳದಿಂದ ತಪ್ಪಿಸಿಕೊಂಡ ಮಾವೋವಾದಿಗಳು ವಯನಾಡ್ನ ಕಾಡುಗಳಲ್ಲಿ ಅಡಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಎನ್‌ಕೌಂಟರ್ ನಡೆದ ವಲಯದಲ್ಲಿ ನಿಯಮಗಳನ್ನು ಬಿಗಿಪಡಿಸಲಾಗಿದೆ.
ವಯನಾಡಿನ ಪಡಿಂಜರತ್ರ ಪಂಚಾಯತ್‌ನ ಕಪ್ಪಿಕ್ಕಲಂ ಮತ್ತು ಪಾಂಡಿಪ್ಪಾಯಿಲ್ನಲ್ಲಿ ನಕ್ಸಲರು ಅಡಗಿರುವುದನ್ನು ಗುರುತಿಸಲಾಗಿದೆ. ಈ ಪ್ರದೇಶಗಳು ನಕ್ಸಲರಿಂದ ಹೊಸದಾಗಿ ರೂಪುಗೊಂಡ ಬಾನಾಸುರ ದಲಾಮ್‌ನ ಭಾಗವಾಗಿವೆ.
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಶಂಕಿತ ನಕ್ಸಲ್ ವೆಲ್ಮುರುಗನ್, ಬಾನಾಸುರ ದಲಾಮ್‌ನ ಪ್ರಮುಖ ನಾಯಕ ಎಂದು ಹೇಳಲಾಗ್ತಿದೆ. ಬಾನಾಸುರ ದಲಾಮ್ ಜೊತೆಗೆ ಮಾವೋವಾದಿಗಳು ಜಿಲ್ಲೆಯಲ್ಲಿ ಕಬಾನಿ ದಲಾಮ್ ಮತ್ತು ನಾಡುಕಾನಿ ದಲಾಮ್ ಹೊಂದಿದ್ದಾರೆ.
ಕಬಾನಿ ದಲಾಮ್ ತಿರುನೆಲ್ಲಿ ಮತ್ತು ತಲಪ್ಪುಳ ಪ್ರದೇಶಗಳನ್ನು ಒಳಗೊಂಡಿದೆ. ನಡುಕಾನಿ ದಲಾಮ್ ವಯಾನಾಡ್ ಮತ್ತು ಮಲಪ್ಪುರಂ ಜಿಲ್ಲೆಯ ಗಡಿಯುದ್ದಕ್ಕೂ ಮೆಪ್ಪಾಡಿ ಬಳಿಯ ಅರಣ್ಯ ಪ್ರದೇಶಗಳನ್ನು ಒಳಗೊಂಡಿದೆ.
ಮಂಗಳವಾರ ನಡೆದ ಎನ್‌ಕೌಂಟರ್‌ನ ಬಳಿಕ ಈ ಪ್ರದೇಶಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.