ಬಲ್ಲಿಯಾ: ಉತ್ತರ ಪ್ರದೇಶದ ಬಲ್ಲಿಯಾ ಮತ್ತು ಗಾಜಿಪುರ ಜಿಲ್ಲೆಗಳಲ್ಲಿ ಗಂಗಾ ನದಿಯಲ್ಲಿ ಶವಗಳು ತೇಲುತ್ತಿರುವುದು ಕಂಡುಬಂದಿದೆ ಎಂದು ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಉತ್ತರ ಪ್ರದೇಶದ ಎರಡು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಬಿಹಾರದ ಬಕ್ಸರ್ನಲ್ಲಿ ಗಂಗಾ ನದಿಯಿಂದ 71 ಶವಗಳನ್ನು ಮೇಲೆತ್ತಲಾಗಿತ್ತು. ಇದು ಕೋವಿಡ್ ರೋಗಿಗಳ ಮೃತದೇಹವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನರಾಹಿ ಪ್ರದೇಶದ ಉಜಿಯರ್, ಕುಲ್ಹಾಡಿಯಾ ಮತ್ತು ಭರೌಲಿ ಘಾಟ್ಗಳಲ್ಲಿ ಸುಮಾರು 45 ಶವಗಳು ತೇಲುತ್ತಿರುವುದು ಕಂಡು ಬಂದಿದೆ ಎಂದು ಉತ್ತರ ಪ್ರದೇಶದ ಬಲ್ಲಿಯಾ ನಿವಾಸಿಗಳು ತಿಳಿಸಿದ್ದಾರೆ. ಒಟ್ಟು ಎಷ್ಟು ಮೃತದೇಹಗಳು ಪತ್ತೆಯಾಗಿವೆ ಎಂಬುವುದರ ಬಗ್ಗೆ ಜಿಲ್ಲಾಡಳಿತ ಇದುವರೆಗೆ ಅಧಿಕೃತವಾಗಿ ತಿಳಿಸಿಲ್ಲ.
ಬಲ್ಲಿಯಾ - ಬಕ್ಸರ್ ಸೇತುವೆಯ ಕೆಳಗೆ ಕೊಳೆತ ಸ್ಥಿತಿಯಲ್ಲಿ ಕೆಲವು ಶವಗಳು ಪತ್ತೆಯಾಗಿವೆ ಎಂದು ಬಲ್ಲಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅದಿತಿ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮತ್ತು ವೃತ್ತ ಅಧಿಕಾರಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಮೃತದೇಹಗಳನ್ನು ವಿಧಿ ವಿಧಾನಗಳ ಪ್ರಕಾರ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎಷ್ಟು ಶವಗಳನ್ನು ಪತ್ತೆ ಮಾಡಲಾಗಿದೆ ಎಂಬುವುದು ತಿಳಿದಿಲ್ಲ. ಇದು ಇತ್ತೀಚೆಗೆ ಮೃತಪಟ್ಟವರ ಶವಗಳಲ್ಲ, ಬಿಹಾರದಲ್ಲಿ ಮೃತದೇಹಗಳನ್ನು ನದಿಗೆ ಎಸೆಯುವ ಸಂಪ್ರದಾಯವಿದೆ. ಶವಗಳು ತೇಲಿ ಬರುವ ದಿಕ್ಕು ನೋಡಿದರೆ, ಬಿಹಾರದಿಂದ ಬಂದಂತಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ತಾಡಾ ಹೇಳಿದ್ದಾರೆ.
ಓದಿ : ಗಂಗಾ ನದಿಯಲ್ಲಿ ಮತ್ತೆ ತೇಲಿದ ಶವಗಳು..ಯುಪಿ - ಬಿಹಾರ್ ಗಡಿಯಲ್ಲಿ 15-20 ಶವಗಳು ಪತ್ತೆ
ಈ ನಡುವೆ ಗಾಜಿಪುರದ ಗಹ್ಮಾರ್ ಮತ್ತು ಬಾರಾ ಗ್ರಾಮಗಳಲ್ಲೂ ಶವಗಳು ತೇಲುತ್ತಿರುವುದು ಕಂಡು ಬಂದಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ನದಿಯಲ್ಲಿ ಶವಗಳು ತೇಲುತ್ತಿರುವ ಬಗ್ಗೆ ಸೋಮವಾರ ನಮಗೆ ಮಾಹಿತಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ಗಾಜಿಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಗಳಾ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.
ಸೋಮವಾರ ಸಂಜೆ ನಾವು ಬಾರಾ ಗ್ರಾಮದಲ್ಲಿ ಶವಗಳನ್ನು ಪತ್ತೆ ಹಚ್ಚಿದ್ದೇವೆ ಮತ್ತು ಅವನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಿದ್ದೇವೆ. ಜಿಲ್ಲಾಡಳಿತದ ತಂಡ ನದಿ ತೀರದ ಗ್ರಾಮಗಳಲ್ಲಿ ಗಸ್ತು ತಿರುಗುತ್ತಿದ್ದು, ಯಾರಿಗಾದರೂ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸಲು ಸಾಧ್ಯವಾಗದಿದ್ದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಿರುವುದಾಗಿ ಮಂಗಳಾ ಪ್ರಸಾದ್ ಸಿಂಗ್ ಹೇಳಿದ್ದಾರೆ. ಬಿಹಾರದ ಬಕ್ಸರ್‌ನ ಅಧಿಕಾರಿಗಳು ಇಲ್ಲಿಗೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ನಿವಾಸಿಗಳು ಯಮುನಾ ನದಿಯಲ್ಲಿ ತೇಲುತ್ತಿದ್ದ ಐದು ಶವಗಳನ್ನು ಗುರುತಿಸಿದ್ದರು. ಈ ಶವಗಳು ಕೋವಿಡ್ ರೋಗಿಗಳದ್ದು ಎಂಬ ಆತಂಕ ಪ್ರಾರಂಭವಾಗಿತ್ತು. ಆದರೆ, ಇದನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ.