ನವದೆಹಲಿ : ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್‌ಗೆ (Param Bir Singh case) ಕೊಂಚ ರಿಲೀಫ್ ಸಿಕ್ಕಿದೆ. ಇವರ ವಿರುದ್ಧ ಪೊಲೀಸರು ಹೊರಡಿಸಿದ್ದ ಜಾಮೀನು ರಹಿತ ವಾರೆಂಟ್‌ಗೆ ಸುಪ್ರೀಂಕೋರ್ಟ್ (Supreme Court) ತಡೆ ನೀಡಿದೆ.
ತಮ್ಮ ವಿರುದ್ಧ ಮಹಾರಾಷ್ಟ್ರದಲ್ಲಿ ದಾಖಲಾದ ಪ್ರಕರಣಗಳು ಸೇರಿದಂತೆ ಇಡೀ ಅವ್ಯವಹಾರದ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ಪರಂಬೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಮಹಾರಾಷ್ಟ್ರ ಸರ್ಕಾರ, ಡಿಜಿಪಿ ಹಾಗೂ ಸಿಬಿಐಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಪರಂಬಿರ್ ಸಿಂಗ್ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆ ನಂತರ ಅವರ ವಿರುದ್ಧ ಎರಡ್ಮೂರು ಪ್ರಕರಣಗಳು ದಾಖಲಾಗಿದ್ದವು. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು. ಇದರ ಬೆನ್ನಲ್ಲೇ ಸಿಂಗ್ ತಲೆಮರೆಸಿಕೊಂಡಿದ್ದರು.
ಕಳೆದ ವಾರ ಪರಂಬೀರ್ ಸಿಂಗ್ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅವರು ಎಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರೆ ವಿಚಾರಣೆಯನ್ನು ಮುಂದುವರಿಸುವುದಾಗಿ ಹೇಳಿತ್ತು.
ಪರಂಬಿರ್ ಸಿಂಗ್ ಪಲಾಯನ ಮಾಡಿಲ್ಲ, ಭಾರತದಲ್ಲೇ ಇದ್ದಾರೆ. ಮುಂಬೈ ಪೊಲೀಸರಿಂದ ಅವರಿಗೆ ಬೆದರಿಕೆ ಇದೆ ಎಂದು ಸಿಂಗ್ ಪರ ವಕೀಲರು ಕೋರ್ಟ್‌ಗೆ ವಿವರಿಸಿದ್ದಾರೆ.
ವಕೀಲರ ವಾದವನ್ನು ಆಲಿಸಿರುವ ನ್ಯಾ.ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠ ಪರಂಬೀರ್ ಅವರಿಗೆ ಬಂಧನದಿಂದ ರಕ್ಷಣೆ ನೀಡಿದೆ. ಮಹಾರಾಷ್ಟ್ರದಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಪರಂಬೀರ್ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಪರಂಬೀರ್ ಸಿಂಗ್ ತಲೆ ಮರೆಸಿಕೊಂಡಿದ್ದಾರೆ ಎಂದು ಘೋಷಿಸಿ : ಕೋರ್ಟ್‌ಗೆ ಪೊಲೀಸರ ಅರ್ಜಿ