ನವದೆಹಲಿ: ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಸೆಪ್ಟೆಂಬರ್ 15 ರವರೆಗೆ ವಿಸ್ತರಿಸಲು ಕೋರಿದ್ದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಅದರ ನಂತರ ಯಾವುದೇ ವಿಸ್ತರಣೆ ನೀಡುವುದಿಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದೆ. ಮಿಶ್ರಾ ಅವರ ಅಧಿಕಾರಾವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಮನವಿಗೆ ಸುಪ್ರೀಂ ಮತ್ತೆ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರ ಪೀಠವು, ಮಿಶ್ರಾ ಅವರ ಅನುಪಸ್ಥಿತಿಯು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆ ರಾಷ್ಟ್ರದ ಹಿತಾಸಕ್ತಿಯಿಂದ ಕೇಂದ್ರ ಸರ್ಕಾರದ ಮನವಿಯನ್ನು ಪರಿಗಣಿಸಲಾಗಿದೆ. ಮಹತ್ತರ ಸಾರ್ವಜನಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ವಿಸ್ತರಣೆಯನ್ನು ನೀಡುತ್ತಿದ್ದೇವೆ. ಆದರೆ, ಮಿಶ್ರಾ ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಇಡಿ ಮುಖ್ಯಸ್ಥರಾಗಿ ಇರುವುದಿಲ್ಲ. ಅವರು ತಮ್ಮ ಸೇವಾ ಅವಧಿಯನ್ನು ಅದೇ ದಿನ ಕೊನೆಗೊಳಿಸಬೇಕು ಎಂದು ಹೇಳಿದೆ.
ವಿಚಾರಣೆ ನಡೆಯುತ್ತಿದ್ದ ವೇಳೆ ಕೇಂದ್ರದ ಸೇವಾವಧಿ ವಿಸ್ತರಣೆಯ ಮನವಿಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ನಿರ್ಗಮಿತ ಮುಖ್ಯಸ್ಥರನ್ನು ಹೊರತುಪಡಿಸಿ ಇಡೀ ಇಲಾಖೆಯು ಅಸಮರ್ಥರಿಂದ ತುಂಬಿದೆಯೇ ಎಂದು ಪ್ರಶ್ನೆ ಮಾಡಿದೆ. ಇಡೀ ಇಲಾಖೆ ಮಿಶ್ರಾ ಒಬ್ಬರನ್ನು ಹೊರತುಪಡಿಸಿ ಅಸಮರ್ಥರಿಂದ ತುಂಬಿದೆಯೇ? ಸಂಸ್ಥೆಯಲ್ಲಿ ಈ ಕೆಲಸವನ್ನು ಮಾಡುವ ಇನ್ನೊಬ್ಬ ವ್ಯಕ್ತಿ ಇಲ್ಲವೇ? ಒಬ್ಬ ವ್ಯಕ್ತಿ ಇಷ್ಟೊಂದು ಅನಿವಾರ್ಯವಾಗಬಹುದೇ? ಇಡಿಯಲ್ಲಿ ಸಮರ್ಥರು ಬೇರೆ ಯಾರೂ ಇಲ್ಲವೇ? ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.
ನಿರ್ಣಾಯಕ ಹಂತದಲ್ಲಿರುವ ಆರ್ಥಿಕ ಕ್ರಿಯಾಯೋಜನೆ ಕಾರ್ಯಪಡೆಯ (FATF) ದೃಷ್ಟಿಯಿಂದ ಜಾರಿ ನಿರ್ದೇಶನಾಲಯದ (ಇ.ಡಿ) ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರ ಸೇವಾವಧಿಯನ್ನು ಅ.15ರವರೆಗೂ ಮುಂದುವರಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು.
ತನಿಖಾ ಸಂಸ್ಥೆಯ ಕಾರ್ಯವಿಧಾನಗಳು, ಕಾರ್ಯಾಚರಣೆಗಳು ಮತ್ತು ಚಟುವಟಿಕೆಗಳ ಜಟಿಲತೆಗಳ ಬಗ್ಗೆ ಚೆನ್ನಾಗಿ ತಿಳಿದಿರುವ ವ್ಯಕ್ತಿಯನ್ನು ಹೊಂದಿರುವುದು ಅತ್ಯಗತ್ಯ. ಅವರ ಸೇವಾ ಅವಧಿ ವಿಸ್ತರಣೆಯಿಂದ ತ್ವರಿತವಾಗಿ ಮತ್ತು ಸಮರ್ಥವಾಗಿ ನಿರ್ವಹಿಸಲು ಸಹಾಯ ಮಾಡಬಹುದು ಎಂದು ಕೇಂದ್ರ ಸರ್ಕಾರ ತನ್ನ ಮನವಿಯಲ್ಲಿ ಉಲ್ಲೇಖ ಮಾಡಿದೆ.
ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಕೆಲವು ನೆರೆಯ ರಾಷ್ಟ್ರಗಳು, ಭಾರತದ ಹಣಕಾಸು ಕ್ರಿಯಾ ಕಾರ್ಯಪಡೆ (FATF)ಯನ್ನು 'ಗ್ರೇ ಲಿಸ್ಟ್'ಗೆ ತರಬೇಕು ಎಂದು ಬಯಸುತ್ತಿವೆ. ಹಾಗಾಗಿ ಇಡಿ ಮುಖ್ಯಸ್ಥರ ಹುದ್ದೆಯಲ್ಲಿ ಅವರು ಮುಂದುವರಿಯುವುದು ಅಗತ್ಯವಾಗಿದೆ. ಹಾಗಾಗಿ, ಅವರ ಅಧಿಕಾರಾವಧಿಯನ್ನು ಅಕ್ಟೋಬರ್ 15ರ ವರೆಗೆ ವಿಸ್ತರಿಸುವಂತೆ ಕೇಳಿಕೊಂಡರು. ಈ ಮನವಿಯನ್ನು ಪರಿಷ್ಕರಿಸಿ ಪೀಠ ಪುರಸ್ಕರಿಸಿದೆ.
ಇನ್ನು ಜುಲೈ 11 ರಂದು ಇದೇ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಂಜಯ್ ಕುಮಾರ್ ಮಿಶ್ರಾ ಅವರಿಗೆ ಮೂರನೇ ಅವಧಿಗೆ ಅಧಿಕಾರ ವಿಸ್ತರಿಸುವ ಕೇಂದ್ರ ಸರ್ಕಾರದ ಆದೇಶವನ್ನು "ಕಾನೂನು ಬಾಹಿರ" ಎಂದು ಹೇಳಿತ್ತು. ಇದು 2021 ರ ನಿರ್ಧಾರಕ್ಕೆ ವಿರುದ್ಧವಾಗಿದೆ ಎಂದು ಸಹ ಹೇಳಿತ್ತು. ಅಲ್ಲದೇ ಜುಲೈ 31ರ ಒಳಗೆ ಇಡಿ ಮುಖ್ಯಸ್ಥರ ಹುದ್ದೆಗೆ ಬೇರೊಬ್ಬರನ್ನು ನೇಮಕ ಮಾಡಬೇಕು ಎಂದು ಪೀಠ ತಾಕೀತು ಸಹ ಮಾಡಿತ್ತು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಪಿಎಫ್‌ಐನ ಕಾರ್ಯ ನಿರ್ವಹಕರಿಬ್ಬರ ಮೇಲೆ ಇಡಿ ದಾಳಿ, ತನಿಖೆ