ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಅವರ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆಗೆ(ಮಾ.10) ಮುಂದೂಡಿದೆ. ನ್ಯಾಯಮೂರ್ತಿಗಳಾದ ಯು ಯು ಲಲಿತ್, ರವೀಂದ್ರ ಎಸ್ ಭಟ್, ಪಿ ಎಸ್ ನರಸಿಂಹ ಅವರ ನೇತೃತ್ವದ ನ್ಯಾಯಪೀಠ ಹಿರಿಯ ವಕೀಲ ಜೈದೀಪ್ ಗುಪ್ತ ಅವರ ಮನವಿ ಮೇರೆಗೆ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಣವನ್ನು ವರ್ಗಾಯಿಸಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿಜಯ್ ಮಲ್ಯ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ ವೈಯಕ್ತಿಕವಾಗಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೊಟೀಸ್ ನೀಡಿತ್ತು.
ಫೆಬ್ರವರಿ 10ರಂದು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿಜಯ್ ಮಲ್ಯ ಅವರಿಗೆ ಖುದ್ದು ಹಾಜರಾಗಲು ಅಥವಾ ಕೌನ್ಸೆಲ್ ಮೂಲಕ ವಿಚಾರಣೆಗೆ ಹಾಜರಾಗಲು ಎರಡು ವಾರಗಳ ಸಮಯಾವಕಾಶ ನೀಡಿತ್ತು. ನಾಳೆ ಅವರು ಕೋರ್ಟ್ ಗೆ ಹಾಜರಾಗಲು ವಿಫಲವಾದರೆ ತಾರ್ಕಿಕ ಅಂತ್ಯವನ್ನು ಸುಪ್ರೀಂ ಕೋರ್ಟ್ ತೆಗೆದುಕೊಳ್ಳಲಿದೆ.
ಇನ್ನು ಮಲ್ಯ ಅವರು ಮೇ 2017ರ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಮಲ್ಯ ಅವರು ತಮ್ಮ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಂಬಂಧಿಸಿದ 9,000 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಸಾಲದ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಇದನ್ನೂ ಓದಿ: 'ಮಲ್ಯ, ನೀರವ್, ಚೋಕ್ಸಿ ವಂಚನೆ ಪ್ರಕರಣ: 18,000 ಕೋಟಿ ರೂ. ಬ್ಯಾಂಕ್ಗೆ ಮರಳಿಸಲಾಗಿದೆ.. ಸುಪ್ರೀಂಗೆ ಸರ್ಕಾರದ ಹೇಳಿಕೆ