ಮಹಾರಾಷ್ಟ್ರ: ಶಿವಸೇನಾ ಮುಖಂಡ, ಸಂಸದ ಸಂಜಯ್ ರಾವತ್ ಅವರ ಆಪ್ತ ಸ್ನೇಹಿತೆ ಸ್ವಪ್ನಾ ಪಾಟ್ಕರ್ ಅವರಿಗೆ ಬೆದರಿಕೆಗಳು ಬಂದಿವೆ. ಅಪರಿಚಿತ ವ್ಯಕ್ತಿಯಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬಂದಿದೆ. ಪತ್ರಾಚಲ್ ಭೂ ಹಗರಣ ಪ್ರಕರಣದಲ್ಲಿ ಇಡಿ ಮುಂದೆ ಶಿವಸೇನಾ ಸಂಸದ ಸಂಜಯ್ ರಾವತ್ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಸ್ವಪ್ನಾ ಪಾಟ್ಕರ್ ಆರೋಪಿಸಿದ್ದಾರೆ.
ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ವಕೋಲಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಈ ಪ್ರಕರಣವನ್ನು ಒಪ್ಪಿಸಿದ್ದಾರೆ. ಪ್ರಕರಣದ ಹಿಂದಿನ ನಿಜವಾದ ಮಾಸ್ಟರ್ ಮೈಂಡ್ ಶಿವಸೇನಾ ಸಂಸದ ಸಂಜಯ್ ರಾವತ್ ಎಂದು ಪಾಟ್ಕರ್ ದೂರಿದ್ದು, ಪ್ರಕರಣವನ್ನು ವಕೋಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ: ಪತ್ರಾ ಚಾಲ್ ಭೂ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಸಾಕ್ಷಿ ಸ್ವಪ್ನಾ ಪಾಟ್ನಕರ್ ಆಗಿದ್ದಾರೆ. ಇವರು ಶಿವಸೇನೆ ನಾಯಕನ ವಿರುದ್ಧ ನೀಡಿರುವ ಹೇಳಿಕೆ ಹಿಂಪಡೆದುಕೊಳ್ಳುವಂತೆ ಒತ್ತಾಯಿಸಿರುವ ಬೆದರಿಕೆ ಪತ್ರ ಸ್ವೀಕರಿಸಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರಿಗೆ ಸ್ವಪ್ನಾ ದೂರು ಸಹ ನೀಡಿದ್ದಾರೆ.
ಪತ್ರಾಚಲ್ ಭೂ ಹಗರಣ ಪ್ರಕರಣದಲ್ಲಿ ಇಡಿ ಮುಂದೆ ಹಾಜರಾಗಿ ಸ್ವಪ್ನಾ ಪಾಟ್ಕರ್ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಜೊತೆಗೆ ತನಗೆ ಮೂರು ಫೋನ್ ನಂಬರ್ಗಳಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಇಡಿ ಮತ್ತು ಮುಂಬೈ ಪೊಲೀಸರಿಗೆ ಪಾಟ್ಕರ್ ಪತ್ರ ಬರೆದಿದ್ದಾರೆ. ಸಂಜಯ್ ರಾವತ್ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯುವಂತೆ ಅಥವಾ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಪಾಟ್ಕರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಡಿ ಪಾಟ್ಕರ್ ಅವರ ಪತ್ರವನ್ನು ಗಂಭೀರವಾಗಿ ಪರಿಗಣಿಸಿದೆ. ದೂರಿನ ಪ್ರತಿಯನ್ನು ವಕೋಲಾ ಪೊಲೀಸ್ ಠಾಣೆ, ಮುಂಬೈ ಪೊಲೀಸ್ ಕಮಿಷನರ್ ಹಾಗೂ ಮುಂಬೈ ಪೊಲೀಸ್ ಅಪರಾಧ ವಿಭಾಗದ ಜಂಟಿ ಆಯುಕ್ತರಿಗೆ ಕಳುಹಿಸಿದೆ. ಸದ್ಯ ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆರ್‌ಬಿಐ ಮತ್ತೆ ಶೇ 0.35 - 0.50ರಷ್ಟು ರೆಪೋ ದರ ಹೆಚ್ಚಿಸಲಿದೆ: ಆಕ್ಸಿಸ್ ಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ
1,034 ಕೋಟಿ ರೂ.ನ ಭೂ ಹಗರಣದಲ್ಲಿ ಇಂದು ಸಂಜಯ್ ರಾವತ್ ಅವರನ್ನು ವಿಚಾರಣೆಗೆ ಇಡಿ ಕರೆದಿತ್ತು. ಆದರೆ ರಾವತ್ ವಿಚಾರಣೆಗೆ ಹಾಜರಾಗಿಲ್ಲ. ಈ ಪ್ರಕರಣದಲ್ಲಿ ಸಂಜಯ್ ರಾವತ್ ಅವರನ್ನು ಇಡಿ ಎರಡು ಬಾರಿ ಪ್ರಶ್ನಿಸಿದೆ.