ಮುಂಬೈ (ಮಹಾರಾಷ್ಟ್ರ): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಶಿವಸೇನೆಯ ಸಂಸದ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ಅವರಿಗೂ ಇದೀಗ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವುತ್ ಅವರನ್ನು ಇಡಿ ಅಧಿಕಾರಿಗಳು ಕಳೆದ ಐದು ದಿನಗಳ ಹಿಂದೆ ಬಂಧಿಸಿದ್ದು, ಆಗಸ್ಟ್ 8ರವರೆಗೆ ಕಸ್ಟಡಿ ಅವಧಿ ವಿಸ್ತರಣೆಯಾಗಿದೆ. ಇದರ ಬೆನ್ನಲ್ಲೇ ಇಂದು ಈ ಮಹತ್ವದ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ: ಭೂ ಹಗರಣ ಪ್ರಕರಣ: ಸಂಜಯ್ ರಾವುತ್ಗೆ ಸಿಗದ ರಿಲೀಫ್; ಆಗಸ್ಟ್ 8ರವರೆಗೆ ED ಕಸ್ಟಡಿ ವಿಸ್ತರಣೆ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವುತ್ ಜತೆಗೆ ಪತ್ನಿ ಹಾಗೂ ಸ್ನೇಹಿತೆಯೂ ಶಾಮೀಲಾಗಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ, ಇಡಿ ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ. ಮುಂಬೈನ ಹೌಸಿಂಗ್ ಡೆವಲಪ್ಮೆಂಟ್ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಸಂಜಯ್ ರಾವುತ್ ಕುಟುಂಬಕ್ಕೆ 1.06 ಕೋಟಿ ರೂ. ಸಿಕ್ಕಿದೆ ಎಂದು ಇಡಿ ಆರೋಪಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ವರ್ಷಾ ರಾವುತ್ ಮತ್ತು ಸಂಜಯ್ ರಾವುತ್ ಅವರ ಇಬ್ಬರು ಸ್ನೇಹಿತರಿಗೆ ಸೇರಿದ್ದ 11 ಕೋಟಿ ರೂ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. ಇದರಲ್ಲಿ ದಾದರ್‌ನಲ್ಲಿರುವ ಫ್ಲಾಟ್ ಮತ್ತು ಅಲಿಬಾಗ್‌ನ ಕಿಹಿಮ್ ಬೀಚ್‌ನಲ್ಲಿರುವ ಎಂಟು ಪ್ಲಾಟ್‌ಗಳು ವರ್ಷಾ ರಾವುತ್ ಅವರಿಗೆ ಸೇರಿದ್ದವು.