ಧರ್ಮಶಾಲಾ: ರಷ್ಯಾ ಉಕ್ರೇನ್ ಯುದ್ಧ ಮುಂದುವರೆದಿದೆ. ಉಭಯ ದೇಶಗಳ ಸೈನಿಕರು ರಣರಂಗದಲ್ಲಿ ಪರಸ್ಪರ ಕಾದಾಟ ಮುಂದುವರೆಸಿದ್ದಾರೆ. ಆದರೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಈ ಎರಡು ಶತ್ರು ದೇಶಗಳ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಪ್ರೀತಿಯ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ.
ರಷ್ಯಾದ ವರ ಸಿರ್ಗಿ ನೋವಿಕಾ ಮತ್ತು ಉಕ್ರೇನ್ನ ವಧು ಅಲಿಯೋನಾ ಬ್ರೋಮೊಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು. ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ ಈ ಜೋಡಿಯನ್ನ ಸ್ಥಳೀಯ ಭಾರತೀಯರು ಅಭಿನಂದಿಸಿದರು. ಇವರಿಬ್ಬರು ಕಳೆದ 3 ತಿಂಗಳಿಂದ ಧರ್ಮಕೋಟ್, ಮೆಕ್ಲಿಯೋಡ್‌ಗಂಜ್‌ನಲ್ಲಿರುವ ಹೋಮ್ ಸ್ಟೇಯಲ್ಲಿ ನೆಲೆಸಿದ್ದರು.
ರಷ್ಯಾ ಉಕ್ರೇನ್ ಪ್ರೇಮಿಗಳ ಮದುವೆ: ಸಿರ್ಗಿ ನೋವಿಕಾ ಮತ್ತು ಅಲಿಯೋನಾ ಬ್ರೋಮೊಕಾ ಕೆಲವು ತಿಂಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದರು. ಇಬ್ಬರೂ ಒಂದೇ ಹೋಮ್ ಸ್ಟೇಯಲ್ಲಿ ವಾಸಿಸುತ್ತಿದ್ದರು. ಇಬ್ಬರು ಅಪರಿಚಿತರ ನಡುವೆ ಧರ್ಮಶಾಲಾದಲ್ಲಿ ನಿಧಾನವಾಗಿ ಮಾತುಕತೆ ಆರಂಭವಾಗಿ ಪ್ರೀತಿ ಅರಳಿತು. ಬಳಿಕ ಇಬ್ಬರೂ ಮದುವೆಯಾಗುವುದಾಗಿ ನಿರ್ಧರಿಸಿದರು. ರಷ್ಯಾ ಮೂಲದ ಸಿರ್ಗಿ ನೋವಿಕಾ ಇಸ್ರೇಲ್ ಪೌರತ್ವ ಪಡೆದಿದ್ದಾರೆ. ಅವರ ದೇಶದ ಯುದ್ಧದ ವಾತಾವರಣ ನೋಡಿ, ಇಬ್ಬರೂ ಭಾರತದಲ್ಲೇ ಮದುವೆಯಾಗಲು ತೀರ್ಮಾನಿಸಿ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಹಿಂದೂ ಸಂಪ್ರದಾಯದ ವಿವಾಹ: ವಿವಾಹವು ಹಿಂದೂ ಸಂಪ್ರದಾಯದ ಪ್ರಕಾರ ನಡೆಯಿತು. ಧರ್ಮಶಾಲಾದ ರಾಧಾ ಕೃಷ್ಣ ದೇವಸ್ಥಾನದಲ್ಲಿ ಸಪ್ತಪದಿ ತುಳಿದರು. ಮುಧುಮಗ ಶೇರ್ವಾನಿ ಮತ್ತು ವಧು ಕೆಂಪು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದರು. ಸದ್ಯಕ್ಕೆ ಇಬ್ಬರು ವಾಸವಿದ್ದ ಹೋಮ್ ಸ್ಟೇ ಮಾಲೀಕ ವಿನೋದ್ ಶರ್ಮಾ ಕನ್ಯಾದಾನ ಮಾಡಿದರು. ಬಳಿಕ ಎಲ್ಲ ವಿಧಿವಿಧಾನಗಳ ಮೂಲಕ ಮದುವೆ ಕಾರ್ಯ ನೆರವೇರಿಸಿಕೊಟ್ಟ ಪಂಡಿತ್ ರಮಣ್ ಶರ್ಮಾ ಅವರಿಂದ ದಂಪತಿ ಆಶೀರ್ವಾದ ಪಡೆದರು. ವಿವಾಹಕ್ಕೆ ಹಿಮಾಚಲಿ ಶೈಲಿಯ ವಿವಿಧ ಖಾದ್ಯಗಳನ್ನು ತಯಾರಿಸಿ, ಅತಿಥಿಗಳಿಗೆ ಬಡಿಸಲಾಯಿತು.
ಇದನ್ನೂ ಓದಿ: ಯುದ್ಧ ಭೂಮಿಯಲ್ಲಿ ಪ್ರೇಮ ವಿವಾಹಗಳು.. ಇದ್ದರು - ಸತ್ತರೂ ನಿಮ್ಮ ಜೊತೆ ಎನ್ನುತ್ತಿರುವ ನವವಿವಾಹಿತರು!