ನವದೆಹಲಿ: ಉಕ್ರೇನ್ನ ಖಾರ್ಕಿವ್ ಮೇಲೆ ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್(21) ಸಾವನ್ನಪ್ಪಿದ್ದು, ಘಟನೆಯ ಸೂಕ್ತ ತನಿಖೆ ನಡೆಸಲು ರಷ್ಯಾ ಮುಂದಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿರುವ ರಷ್ಯಾ ರಾಯಭಾರಿ ಡೇನಿಸ್ ಅಲಿಪೋವ್, ಭಾರತೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಸಾವಿಗೆ ಸಂತಾಪ ಸೂಚಿಸಿದರು. ತೀವ್ರ ಸಂಘರ್ಷದ ಸಂದರ್ಭದಲ್ಲಿ ಉಕ್ರೇನ್ನಲ್ಲಿರುವ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ನಡೆದು ಹೋಗಿರುವ ದುರದೃಷ್ಟಕರ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಸಲು ರಷ್ಯಾ ತನ್ನ ಕೈಲಾದ ಎಲ್ಲ ಕೆಲಸಗಳನ್ನು ಮಾಡುತ್ತದೆ ಎಂದರು.
ಉಕ್ರೇನ್ನ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಷ್ಯಾ ದೇಶದ ಮೂಲಕ ಸ್ಥಳಾಂತರ ಮಾಡುವಂತೆ ಭಾರತ ಮಾಡಿರುವ ಮನವಿಯನ್ನು ನಾವು ಸ್ವೀಕರಿಸಿದ್ದು, ಅವರನ್ನು ಸುರಕ್ಷಿತವಾಗಿ ಕರೆತರುವ ದೃಷ್ಟಿಯಿಂದ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಭಾರತೀಯರ ರಕ್ಷಣೆಗೆ ಮಾನವೀಯ ಕಾರಿಡಾರ್ ರಚನೆ: ರಷ್ಯಾ
ಕಳೆದ ಏಳು ದಿನಗಳಿಂದ ಉಕ್ರೇನ್ನ ವಿವಿಧ ನಗರಗಳ ಮೇಲೆ ರಷ್ಯಾ ದಾಳಿ ನಡೆಸುತ್ತಿದ್ದು, ಹೀಗಾಗಿ ಖಾರ್ಕಿವ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಅವರ ಸುರಕ್ಷತೆಗಾಗಿ ಭಾರತ ಈಗಾಗಲೇ ರಷ್ಯಾ ಮತ್ತು ಉಕ್ರೇನ್ ಬಳಿ ಮನವಿ ಮಾಡಿದೆ.
ಉಕ್ರೇನ್ನ ಖಾರ್ಕಿವ್, ಸುಮಿ ಮತ್ತು ಇತರೆ ನಗರಗಳಲ್ಲಿ ಭಾರತದ ಸುಮಾರು 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಭಾರತ ಮಗ್ನವಾಗಿದೆ. ಇದೀಗ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮಾನವೀಯ ಕಾರಿಡಾರ್ಗಳನ್ನ ಸ್ಥಾಪಿಸಲು ರಷ್ಯಾ ಮುಂದಾಗಿದೆ.