ಚೆನ್ನೈ (ತಮಿಳುನಾಡು): ತಮಿಳುನಾಡಿನ ಎರಡು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದಿರುವ 3 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಹಿವಾಟುಗಳ ಬಹಿರಂಗಪಡಿಸದಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ. ತಿರುಚಿರಾಪಳ್ಳಿ ಜಿಲ್ಲೆಯ ಉರೈಯೂರಿನಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಮತ್ತು ತಿರುವಳ್ಳೂರು ಜಿಲ್ಲೆಯ ರೆಡ್‌ಹಿಲ್ಸ್‌ನಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ವಹಿವಾಟು ಪತ್ತೆ ಮಾಡಲಾಗಿದೆ.
ಉರೈಯೂರು ಹಾಗೂ ರೆಡ್‌ಹಿಲ್ಸ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ತಮಿಳುನಾಡು ನಿರ್ದೇಶನಾಲಯದ ಗುಪ್ತಚರ ಮತ್ತು ಅಪರಾಧ ತನಿಖಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ, ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. 20 ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳು ಮತ್ತು ಎಂಟು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ 20 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಯ ತೆರಿಗೆ ನಿಯಮಗಳ ಪ್ರಕಾರ ಇನ್ಸ್ಪೆಕ್ಟರ್ ಜನರಲ್ ಅಥವಾ ಸಬ್ ರಿಜಿಸ್ಟ್ರಾರ್ ಯಾವುದೇ ವ್ಯಕ್ತಿಯಿಂದ ಸ್ಥಿರಾಸ್ತಿಯ ಖರೀದಿ ಅಥವಾ ಮಾರಾಟದ ಬಗ್ಗೆ ಮಾಹಿತಿಯನ್ನು 3 0 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಇಲಾಖೆಗೆ ಹಣಕಾಸಿನ ವಹಿವಾಟಿನ ಹೇಳಿಕೆಯ ರೂಪದಲ್ಲಿ (Statement of Financial Transaction - SFT) ತಿಳಿಸಬೇಕು. ವ್ಯವಹಾರವನ್ನು ನೋಂದಾಯಿಸಿದ ಆರ್ಥಿಕ ವರ್ಷದ ನಂತರ ಮೇ 31ರಂದು ಅಥವಾ ಅದಕ್ಕೂ ಮೊದಲು ಮಾಹಿತಿಯನ್ನು ಒದಗಿಸಬೇಕು.
ಎಸ್‌ಆರ್‌ಒಗಳಿಗೆ ಐಟಿ ಇಲಾಖೆಯಿಂದ ಹಲವಾರು ಔಟ್‌ರೀಚ್ ಕಾರ್ಯಗಳನ್ನು ನಡೆಸಿದ್ದರೂ ಸಮಯಕ್ಕೆ ಸರಿಯಾಗಿ ಎಸ್‌ಎಫ್‌ಟಿಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಆದರೂ, ನಿಗದಿತ ದಿನಾಂಕದೊಳಗೆ ನಿಗದಿತ ವಹಿವಾಟುಗಳನ್ನು ವರದಿ ಮಾಡಲು ಟಿಎನ್ ನೋಂದಣಿ ಇಲಾಖೆಯ ಹಲವಾರು ಅಧಿಕಾರಿಗಳಿಗೆ ಇಚ್ಛೆ ಇಲ್ಲ ಎಂಬುವುದು ಕಂಡು ಬಂದಿದೆ ಎಂದು ಆದಾಯ ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರೆಡ್‌ಹಿಲ್ಸ್ ಮತ್ತು ಉರೈಯೂರು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಡೆಸಿದ ಪರಿಶೀಲನೆಯಲ್ಲಿ ಕಳೆದ ಐದು ಹಣಕಾಸು ವರ್ಷಗಳಲ್ಲಿ ನಡೆದಿರುವ 3,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಹಿವಾಟುಗಳನ್ನು ಬಹಿರಂಗಪಡಿಸದಿರುವುದನ್ನು ಪತ್ತೆ ಹಚ್ಚಲಾಗಿದೆ. 3 ಸಾವಿರ ಕೋಟಿ ರೂಪಾಯಿ ವಹಿವಾಟುಗಳ ಪೈಕಿ ರೆಡ್‌ಹಿಲ್ಸ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 2,000 ಕೋಟಿ ರೂಪಾಯಿ ಹಾಗೂ ಉರೈಯೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 1,000 ಕೋಟಿ ರೂಪಾಯಿ ಮೌಲ್ಯದ ವಹಿವಾಟುಗಳನ್ನು ಇಲಾಖೆಗೆ ತಿಳಿಸಲಿಲ್ಲ ಎಂದು ದಾಖಲೆಗಳ ಪರಿಶೀಲನೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ತಮಿಳುನಾಡಿನ 575 ಸಬ್‌ರಿಜಿಸ್ಟ್ರಾರ್ ಕಚೇರಿಗಳ ಪೈಕಿ 270 ಸಬ್ ರಿಜಿಸ್ಟ್ರಾರ್ ಕಚೇರಿಗಳು ಹಣಕಾಸು ವಹಿವಾಟಿನ ವರದಿ ಸಲ್ಲಿಸಿಲ್ಲ. ಸರಿಯಾಗಿ ವರದಿ ನೀಡದ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಗುಪ್ತಚರ ವಿಭಾಗದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 25 ಕೋಟಿ ರೂ ತೆರಿಗೆ ವಂಚನೆ: ಕೇರಳದ ಯೂಟ್ಯೂಬರ್ಗಳ ಮೇಲೆ IT ದಾಳಿ!