ನವದೆಹಲಿ: ಕೋವಿಡ್ 2ನೇ ಅಲೆ ವೇಳೆ ಎದುರಾದ ಸಮಸ್ಯೆಗಳಿಗಾಗಿ 23 ಸಾವಿರ ಕೋಟಿ ರೂಪಾಯಿಗಳ ತುರ್ತು ಸ್ಪಂದನಾ ಪ್ಯಾಕೇಜ್ ಘೋಷಣೆ ಮಾಡಿರುವುದಾಗಿ ಕೇಂದ್ರದ ನೂತನ ಆರೋಗ್ಯ ಸಚಿವ ಮನ್ಸುಖ್ ಮಾಂಡೊವೀಯ ತಿಳಿಸಿದ್ದಾರೆ.
ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಆರ್ಥಿಕ ಪ್ಯಾಕೇಜ್ ಬಳಸಲಿವೆ ಎಂದು ಹೇಳಿದರು.
736 ಜಿಲ್ಲೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗಗಳು, ಹೊಸದಾಗಿ 20,000 ಐಸಿಯು ಬೆಡ್‌ಗಳ ನಿರ್ಮಾಣ ಹಾಗೂ ಔಷಧಿ ಖರೀದಿಗೆ ಈ ಆರ್ಥಿಕ ಪ್ಯಾಕೇಜ್ ನೆರವಾಗಲಿದೆ. 23,000 ಕೋಟಿಗಳಲ್ಲಿ ಸುಮಾರು 15,000 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಖರ್ಚು ಮಾಡಲಿದ್ದು, 8,000 ಕೋಟಿ ರೂಪಾಯಿಗಳನ್ನು ರಾಜ್ಯಗಳಿಗೆ ವಿನಿಯೋಗಿಸಲಾಗುವುದು. ಮುಂದಿನ 9 ತಿಂಗಳಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.