ಗಾಂಧಿನಗರ (ಗುಜರಾತ್) : ಇಲ್ಲಿನ ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) 3,000 ಕೆ.ಜಿಯಷ್ಟು ಹೆರಾಯಿನ್ ಮಾದಕವಸ್ತುವನ್ನು ವಶಪಡಿಸಿಕೊಂಡಿದೆ.
ಅಫ್ಘಾನಿಸ್ತಾನದಿಂದ ಮುಂದ್ರಾ ಬಂದರಿಗೆ ಎರಡು ಕಂಟೇನರ್‌ಗಳಲ್ಲಿ 3,000 ಕೆ.ಜಿ ಹೆರಾಯಿನ್ ಅಮದು ಮಾಡಿಕೊಳ್ಳಲಾಗಿದೆ. ಹೆರಾಯಿನ್‌ನ ಅಧಿಕೃತ ಬೆಲೆಯನ್ನು ಘೋಷಿಸಲಾಗಿಲ್ಲ, ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಇದರ ಮೌಲ್ಯ 21,000 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಇದೇ ಸೆ. 19 ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಗುಜರಾತ್‌ನ ಮುಂದ್ರಾ ಬಂದರಿನಿಂದಲೇ ಅಂದಾಜು 9,000 ಕೋಟಿ ರೂ. ಮೌಲ್ಯದ ಹೆರಾಯಿನ್ ಹೊಂದಿರುವ ಕಂಟೇನರ್‌ಗಳನ್ನು ವಶಪಡಿಸಿಕೊಂಡಿದ್ದರು. ಈ ಬೆನ್ನಲ್ಲೇ ಇದೀಗ ಭಾರಿ ಮೊತ್ತದ ಮಾದಕ ವಸ್ತು ಮತ್ತೆ ಪತ್ತೆಯಾಗಿದೆ.
ಭಾರತಕ್ಕೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಹಡಗುಗಳ ಮೂಲಕ ಮಾದಕ ವಸ್ತು ಕಳ್ಳಸಾಗಣೆ ಮಾಡುವುದು ಹೆಚ್ಚಾಗುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಬೆಳವಣಿಗೆ ಎಂದು ಭದ್ರತಾ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.