ಮೊರಾದಾಬಾದ್ (ಉತ್ತರ ಪ್ರದೇಶ) : ಮಹಿಳೆಯೊಬ್ಬರು ಬ್ಯಾಂಕ್ ಲಾಕರ್ನಲ್ಲಿಟ್ಟಿದ್ದ 18 ಲಕ್ಷ ರೂಪಾಯಿಗಳನ್ನು ಗೆದ್ದಲುಗಳು ತಿಂದು ಹಾಕಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಅಲ್ಕಾ ಪಾಠಕ್ ಎಂಬುವರು ತಮ್ಮ ಮಗಳ ಮದುವೆ ಖರ್ಚಿಗೆ ಬೇಕಾಗುತ್ತದೆ ಎಂದು ಉಳಿತಾಯ ಮಾಡಿ ಅಕ್ಟೋಬರ್ 2022ರಲ್ಲಿ 18 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದರು. ಆದರೆ ಈಗ ನೋಟುಗಳೆಲ್ಲ ಗೆದ್ದಲು ತಿಂದು ಮಣ್ಣಾಗಿರುವುದನ್ನು ನೋಡಿ ಮಹಿಳೆಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ.
ಲಾಕರ್ನ ವಾರ್ಷಿಕ ನಿರ್ವಹಣೆ ಮತ್ತು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪರಿಶೀಲನೆಗಾಗಿ ಅಲ್ಕಾ ಪಾಠಕ್ ಅವರನ್ನು ಬ್ಯಾಂಕಿಗೆ ಕರೆಸಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿಗೆ ಬಂದು ಲಾಕರ್ ತೆರೆದ ಮಹಿಳೆ ಗೆದ್ದಲು ತಿಂದ ನೋಟುಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ನಂತರ ಈ ಬಗ್ಗೆ ಆಕೆ ಬ್ಯಾಂಕ್ ಮ್ಯಾನೇಜರ್ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಆಫ್ ಬರೋಡಾದ ಆಶಿಯಾನಾ ಬ್ರಾಂಚ್ನಲ್ಲಿ ಈ ಘಟನೆ ನಡೆದಿದೆ.
ಅಲ್ಕಾ ಪಾಠಕ್ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಮಕ್ಕಳಿಗೆ ಟ್ಯೂಶನ್ ಹೇಳುತ್ತ ಜೀವನ ಸಾಗಿಸುತ್ತಾರೆ. ಇವರು ತಮ್ಮ ಜೀವಮಾನವಿಡೀ ಕಷ್ಟಪಟ್ಟು ಉಳಿಸಿದ ಹಣ ಮತ್ತು ಆಭರಣಗಳನ್ನು ಲಾಕರ್ ನಲ್ಲಿ ಇಟ್ಟಿದ್ದರು. ಲಾಕರ್ನಲ್ಲಿ ಕರೆನ್ಸಿ ನೋಟುಗಳನ್ನು ಇರಿಸುವಂತಿಲ್ಲ ಎಂಬ ಬಗ್ಗೆ ತಿಳುವಳಿಕೆ ಇಲ್ಲದೆ ಆಭರಣಗಳೊಂದಿಗೆ ನೋಟುಗಳನ್ನು ಅಹ ಅದರಲ್ಲಿ ಇಟ್ಟಿದ್ದೇ ಈ ಎಲ್ಲ ಅವಾಂತರಕ್ಕೆ ಕಾರಣವಾಗಿದೆ.
ಬ್ಯಾಂಕ್ ಲಾಕರ್ನಲ್ಲಿ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಇಡಬೇಕಾದರೆ ಪಾಲಿಸಬೇಕಾದ ನಿಯಮಗಳ ಬಗ್ಗೆ ತನಗೆ ಗೊತ್ತಿರಲಿಲ್ಲ ಎಂಬುದನ್ನು ಮಹಿಳೆ ಒಪ್ಪಿಕೊಂಡಿದ್ದಾರೆ. ಇದರ ನಂತರ, ಶಾಖಾ ವ್ಯವಸ್ಥಾಪಕರು ಘಟನೆಯನ್ನು ಮೇಲಧಿಕಾರಿಗಳಿಗೆ ವರದಿ ಮಾಡಿದ್ದು, ಹಾನಿಯ ಪ್ರಮಾಣ ನಿರ್ಣಯಿಸಲು ತನಿಖೆ ಪ್ರಾರಂಭಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ರಾಜಸ್ಥಾನದ ಉದಯಪುರದಲ್ಲಿ ಇದೇ ರೀತಿಯ ಘಟನೆ ನಡೆದ ಬಗ್ಗೆ ವರದಿಯಾಗಿತ್ತು. ಉದಯಪುರದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ನ ಲಾಕರ್ನಲ್ಲಿ ಸುನೀತಾ ಮೆಹ್ತಾ ಎಂಬ ಮಹಿಳೆಯೊಬ್ಬರು 2.15 ಲಕ್ಷ ರೂ.ಗಳನ್ನು ಇಟ್ಟಿದ್ದರು. ಇದರಲ್ಲಿ 2 ಲಕ್ಷ ರೂಪಾಯಿಗಳನ್ನು ಒಂದು ಬಟ್ಟೆಯ ಚೀಲದಲ್ಲಿ ಹಾಗೂ 15 ಸಾವಿರ ರೂಪಾಯಿಗಳನ್ನು ಹೊರಗೆ ಇಡಲಾಗಿತ್ತು.
ಆದರೆ ಕೆಲ ದಿನಗಳ ನಂತರ ಅವರು ಬ್ಯಾಂಕಿಗೆ ಬಂದು ನೋಡುವಷ್ಟರಲ್ಲಿ 15 ಸಾವಿರ ರೂಪಾಯಿಗಳು ಹಾಳಾಗಿರುವುದು ಕಂಡು ಬಂದಿತ್ತು. ಆಗ ಬ್ಯಾಂಕಿನವರು ಆ ನೋಟುಗಳ ಬದಲಿಗೆ ಬೇರೆ ನೋಟುಗಳನ್ನು ನೀಡಿದ್ದರು. ಆದರೆ ಮನೆಗೆ ಬಂದು ಬಟ್ಟೆ ಚೀಲ ಬಿಚ್ಚಿ ನೋಡಿದರೆ ಅದರಲ್ಲಿನ ಎಲ್ಲ ನೋಟುಗಳನ್ನು ಗೆದ್ದಲುಗಳು ತಿಂದು ಹಾಕಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ : ಅನ್ಯಗ್ರಹಗಳಲ್ಲಿ ಜೀವಿಗಳಿವೆಯೇ? ಪತ್ತೆ ಕಾರ್ಯಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆವಿಷ್ಕರಿಸಿದ ವಿಜ್ಞಾನಿಗಳು