ಭಿಲ್ವಾರ(ರಾಜಸ್ಥಾನ) : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 79ರ ಬೇರಾ ಛೇದಕ ಬಳಿ ಅಪಘಾತವೊಂದು ಸಂಭವಿಸಿದೆ. ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ನಾಲ್ಕು ಶವಗಳನ್ನು ರಾಯಲ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ. ರಾಜ್‌ಸಮಂದ್ ಜಿಲ್ಲೆಯ ರೈಲ್‌ಮಾಂಗ್ರಾ ಪ್ರದೇಶದ ಅಮರಪುರ ಗ್ರಾಮದ ನಿವಾಸಿ ದೇವಿಲಾಲ್ ಅವರು, ಪತ್ನಿ, ಮಗ ಮತ್ತು ಕುಟುಂಬದ ಸದಸ್ಯರೊಂದಿಗೆ ಜೈಪುರದಿಂದ ಅಮರಪುರ ಗ್ರಾಮಕ್ಕೆ ಹೋಗುತ್ತಿದ್ದರು ಎಂದು ರೈಲಾ ಪೊಲೀಸ್ ಠಾಣೆಯ ಉಸ್ತುವಾರಿ ತಿಳಿಸಿದ್ದಾರೆ.
ಅಪಘಾತದಲ್ಲಿ ದೇವಿಲಾಲ್, ಅವರ ಪತ್ನಿ, ಮಗ ಮತ್ತು ಕುಟುಂಬದ ಸದಸ್ಯರೊಬ್ಬರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಲ್ಕು ಶವಗಳನ್ನು ಕಾರಿನಿಂದ ಹೊರ ತೆಗೆದು ಪಟ್ಟಣದ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ. ಘಟನೆಯ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿದೆ.
ಇದನ್ನೂ ಓದಿ: ದಟ್ಟ ಮಂಜಿನಲ್ಲಿ ಗ್ಯಾಸ್ ತುಂಬಿದ ಲಾರಿ - ಬಸ್ ಮುಖಾಮುಖಿ ಡಿಕ್ಕಿ.. ಆರು ಸಾವು, 15 ಪ್ರಯಾಣಿಕರಿಗೆ ಗಾಯ!
ಘಟನೆ ಕುರಿತು ಮೃತರ ಸಂಬಂಧಿಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಬಂಧಿಕರು ಬಂದ ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ, ಎರಡೂ ವಾಹನಗಳ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ. ಡಿಕ್ಕಿಯ ರಭಸಕ್ಕೆ ಕಾರು ಸ್ಫೋಟಗೊಂಡಿದ್ದು, ಟ್ರಕ್ ಕೂಡ ಪಲ್ಟಿಯಾಗಿದೆ.