ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹದಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ 15 ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯದ ಗಡಿಯಲ್ಲಿರುವ ಚಕ್ಕಿ ನದಿಗೆ ಅಡ್ಡಲಾಗಿ ಕಟ್ಟಲಾದ ರೈಲ್ವೆ ಸೇತುವೆಯೂ ಕುಸಿದು ಬಿದ್ದಿದೆ.
ಮಂಡಿ ಜಿಲ್ಲೆಯು ಮಳೆಗೆ ಭಾರೀ ಹಾನಿಗೀಡಾಗಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ದುರಂತಗಳು ಸಂಭವಿಸಿವೆ. ಈವರೆಗೂ ನಾಲ್ವರು ಮೃತಪಟ್ಟ ಬಗ್ಗೆ ವರದಿಯಾಗಿದ್ದು, ಇನ್ನೂ 15 ಮಂದಿ ನಾಪತ್ತೆಯಾಗಿದ್ದಾರೆ. ಜೊತೆಗೆ ಚಂಬಾ, ಕಂಗ್ರಾ, ಹಮೀರ್‌ಪುರ, ಶಿಮ್ಲಾ ಮತ್ತು ಸಿರ್ಮೌರ್ ಪ್ರದೇಶಗಳೂ ಮಳೆ ಪೀಡಿತ ಜಿಲ್ಲೆಗಳಾಗಿವೆ. ಇನ್ನೊಂದೆಡೆ ಮಂಡಿ ಜಿಲ್ಲೆಯಲ್ಲಿ ಮನೆ ಕುಸಿದು ಗ್ರಾ.ಪಂ ಅಧ್ಯಕ್ಷ ಸೇರಿ 7 ಜನ ಮೃತಪಟ್ಟಿದ್ದಾರೆ.
ಭೂಕುಸಿತ, ಕೊಚ್ಚಿ ಹೋದ ಮನೆ: ಇನ್ನು ಕಶಾಂಗ್ಎಂಬಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಒಂಬತ್ತು ಜನರು ಸಿಲುಕಿಕೊಂಡಿದ್ದಾರೆ. ಭೂಕುಸಿತದ ಅವಶೇಷಗಳಲ್ಲಿ ಅವರು ಸಮಾಧಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಚಂಬಾ ಜಿಲ್ಲೆಯ ಬಾನೆಟ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಹಮೀರ್‌ಪುರ ಜಿಲ್ಲೆಯಲ್ಲಿ ಮಳೆ ನೀರಿನ ಪ್ರವಾಹದಲ್ಲಿ ಸಿಲುಕಿದ್ದ 22 ಜನರ ಪೈಕಿ 18 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಉಳಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ತಂಡ ತಿಳಿಸಿದೆ.
ಕುಸಿದು ಬಿದ್ದ ರೈಲ್ವೆ ಸೇತುವೆ: ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಗಡಿಯಲ್ಲಿರುವ ಪಠಾಣ್‌ಕೋಟ್‌ನಲ್ಲಿ ಚಕ್ಕಿ ನದಿಯು ರಭಸದಿಂದ ಹರಿಯುತ್ತಿದ್ದು, 800 ಮೀಟರ್ ಉದ್ದದ ರೈಲ್ವೆ ಸೇತುವೆಯು ಪ್ರವಾಹಕ್ಕೆ ಸಿಲುಕಿ ಸೇತುವೆಯ ಪಿಲ್ಲರ್ ಕುಸಿದು ಬಿದ್ದಿದೆ.
1928 ರಲ್ಲಿ ಬ್ರಿಟಿಷರು ಈ ರೈಲ್ವೆ ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಕಳೆದ ತಿಂಗಳು ಸೇತುವೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಇದರಿಂದ ಈ ಮಾರ್ಗದ ರೈಲ್ವೆ ಸಂಚಾರನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆಗೆ ಸೇತುವೆ ಪಿಲ್ಲರ್ ಕೊಚ್ಚಿ ಹೋಗಿದೆ.
ಕಾರ್ಮಿಕರ ರಕ್ಷಣೆ: ಕಂಗ್ರಾ ಜಿಲ್ಲೆಯಲ್ಲಿ ಪ್ರವಾಹದ ಮಧ್ಯೆ ಮರಳು ಕ್ವಾರಿಯಲ್ಲಿ ಸಿಲುಕಿದ್ದ 8 ಜನರನ್ನು ಸೈನಿಕರು, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು 14 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಮರಳು ಕ್ವಾರಿಗೆ ಕೆಲಸಕ್ಕೆ ಹೋಗಿದ್ದ ವೇಳೆ ಭಾರಿ ಮಳೆಯಿಂದಾಗಿ ಕಾರ್ಮಿಕರು ಅಲ್ಲಿಯೇ ಸಿಲುಕಿಕೊಂಡಿದ್ದರು. ವಿಷಯ ತಿಳಿದ ರಕ್ಷಣಾ ತಂಡ, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ಸ್ಥಳಕ್ಕೆ ಧಾವಿಸಿ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಜೀವಂತವಾಗಿ ರಕ್ಷಿಸಿ ಕರೆತಂದಿದ್ದಾರೆ.
14 ಗಂಟೆ ನೀರಿನಲ್ಲಿ: ತೀವ್ರ ಮಳೆಯಿಂದಾಗಿ ನೀರು ಕ್ವಾರಿಯ ಒಳಗೆ ನುಗ್ಗಿದೆ. ಇದರಿಂದ ಕಾರ್ಮಿಕರು ಎತ್ತರದ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ. ನೀರು ಹೆಚ್ಚಾದ ಕಾರಣ ಕ್ವಾರಿಯಿಂದ ಹೊರಬರಲಾಗದೇ ಅಲ್ಲಿಯೇ 14 ಗಂಟೆಗಳ ಕಾಲ ಸಿಲುಕಿದ್ದರು.
8 ಜನರನ್ನು 14 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಕಾಪಾಡಿದ ತಂಡದ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ರಕ್ಷಣಾ ತಂಡಕ್ಕೆ ನೆರವಾದ ಸ್ಥಳೀಯ ಈಜುಗಾರರಿಗೆ ಜಿಲ್ಲಾಡಳಿತ ಬಹುಮಾನ ಘೋಷಿಸಿದೆ.
ಶಾಲೆ ಕಾಲೇಜು ಬಂದ್ : ಕಂಗ್ರಾ, ಚಂಬಾ, ಬಿಲಾಸ್ಪುರ್, ಸಿರ್ಮೌರ್ ಮತ್ತು ಮಂಡಿ ಜಿಲ್ಲೆಗಳಲ್ಲಿ ಮುಂದಿನ 2-3 ಗಂಟೆಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಲು ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲ ಶಾಲೆಗಳನ್ನು ಮುಚ್ಚಲು ಅಲ್ಲಿನ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಓದಿ: ಭೂ ಕುಸಿತದಿಂದ ಪಂಚಾಯಿತಿ ಅಧ್ಯಕ್ಷನ ಮನೆ ನೆಲಸಮ.. ಏಳು ಜನ ಸಾವು, ಘಟನಾ ಸ್ಥಳಕ್ಕೆ ತಲುಪದ ರಕ್ಷಣಾ ತಂಡ