ರಾಯಗಡ(ಒಡಿಶಾ) : ರಾಯಗಡ ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು 7 ಮಂದಿ ಸಾವನ್ನಪ್ಪಿದ್ದು, 71 ಮಂದಿ ಶಂಕಿತ ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಆರೋಗ್ಯ ಅಧಿಕಾರಿಗಳಿಂದ ವರದಿಯನ್ನು ಕೇಳಿದೆ. ಇದರ ನಡುವೆ ವಿಧಾನಸಭೆಯಲ್ಲಿಯೂ ಈ ವಿಷಯ ಮಾರ್ಧನಿಸಿದೆ.
ಕಳೆದ ಮೂರು ದಿನಗಳಲ್ಲಿ ಕಾಶಿಪುರ ಬ್ಲಾಕ್‌ನ ವಿವಿಧ ಗ್ರಾಮಗಳಲ್ಲಿ ಸಾವುಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 11 ವೈದ್ಯರ ತಂಡವು ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ನೀರು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ ಎಂದು ಅವರು ತಿಳಿಸಿದ್ದಾರೆ.
ನೀರಿನಿಂದ ಹರಡುವ ರೋಗವು ಮೊದಲು ಮಾಲಿಗುಡ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ನಂತರ ದುಡುಕಬಹಾಲ್, ಟಿಕಿರಿ, ಗೋಬ್ರಿಘಾಟಿ, ರೌತಘಾಟಿ ಮತ್ತು ಜಳಖೂರ ಗ್ರಾಮಗಳಲ್ಲಿ ವರದಿಯಾಗಿದೆ ಎನ್ನಲಾಗಿದೆ. ದಂಗಸಿಲ್, ರೆಂಗಾ, ಹದಿಗುಡ, ಮೈಕಾಂಚ್, ಶಂಕರದ ಮತ್ತು ಕೂಚಿಪದರ್ ಗ್ರಾಮಗಳಲ್ಲಿ ಇನ್ನೂ ಹಲವರು ಅತಿಸಾರದಿಂದ ಬಳಲುತ್ತಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೆರೆದ ಬಾವಿ ನೀರು ಕುಡಿದು ಆಸ್ಪತ್ರೆಗೆ ದಾಖಲಾಗಿರುವ 71 ಜನರಲ್ಲಿ 46 ಮಂದಿ ಟಿಕಿರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್‌ಸಿ), 14 ಮಂದಿ ಕಾಶಿಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ್ತು 11 ಬಾಲಕಿಯರು ತತೀಬಾರ್ ಪಿಎಚ್‌ಸಿಯ ಆಶ್ರಮ ಶಾಲೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತಿಸಾರದಿಂದ ಸಾವು ಸಂಭವಿಸಿದೆ ಎಂಬುದನ್ನು ನಾವು ಇನ್ನೂ ದೃಢೀಕರಿಸಿಲ್ಲ, ಅತಿಸಾರ ಪ್ರಕರಣಗಳು ವರದಿಯಾಗಿರುವುದರಿಂದ ನೀರಿನಿಂದ ಹರಡುವ ರೋಗಗಳಿಗೆ ಚಿಕಿತ್ಸೆಯನ್ನು ಪ್ರಾರಂಭಿಸಿದ್ದೇವೆ ಎಂದು ಅಧಿಕಾರೋರ್ವರು ಮಾಹಿತಿ ನೀಡಿದ್ದಾರೆ.
ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಕಲುಷಿತ ನೀರಿನ ಮೂಲಗಳನ್ನು ಸೋಂಕುರಹಿತಗೊಳಿಸಲಾಗುತ್ತಿದೆ ಎಂದು ಅಧಿಕಾರಿ ಸಿಂಗ್ ಹೇಳಿದ್ದಾರೆ. 2008 ರಲ್ಲಿ ಅತಿಸಾರದಿಂದ ಈ ಭಾಗದಲ್ಲಿ ಸುಮಾರು 100 ಜನರು ಸಾವನ್ನಪ್ಪಿದರು. 2010 ರಲ್ಲಿ ಕಾಲರಾ ಸುಮಾರು 100 ಜನರನ್ನು ಬಲಿ ತೆಗೆದುಕೊಂಡಿತ್ತು. ಶನಿವಾರ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ : ಉಕ್ರೇನ್ ನಿಂದ ಪಾರಾದ ವೈದ್ಯಕೀಯ ವಿದ್ಯಾರ್ಥಿಗಳ ಬದುಕು ಅತಂತ್ರ : ಆತಂಕದಲ್ಲಿ ಪೋಷಕರು