ನವದೆಹಲಿ: ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡುತ್ತಿರುವ ವೈರಲ್ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ ಫಿಸಿಯೋಥೆರಪಿಸ್ಟ್ ಅಲ್ಲ. ಬದಲಾಗಿ ಆತ ಅತ್ಯಾಚಾರ ಆರೋಪಿ ಕೈದಿ ರಿಂಕು ಎಂದು ತಿಹಾರ್ ಜೈಲಿನ ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ಪೋಕ್ಸೊ ಕಾಯ್ದೆಯ ಸೆಕ್ಷನ್ 6 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 506 ಮತ್ತು 509 ರ ಅಡಿಯಲ್ಲಿ ರಿಂಕು ವಿರುದ್ಧ ಎಫ್ಐಆರ್ ದಾಖಲಾಗಿದೆ. ಅತ್ಯಾಚಾರ ಆರೋಪಿಯಿಂದ ಮಸಾಜ್ ಮಾಡಿಸಿಕೊಂಡ ವಿಚಾರದ ಬಗ್ಗೆ ಆಮ್ ಆದ್ಮಿ ಪಾರ್ಟಿ ಇನ್ನು ಯಾವುದೇ ಪ್ರತಿಕ್ರಿಯೆ ನೀಡದೆ ಜಾಣಮೌನ ವಹಿಸಿದೆ.
ನಾಚಿಕೆಗೇಡು. ಇದು ಫಿಸಿಯೋಥೆರಪಿ ಅಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ ಮತ್ತು ಮೇಲಾಗಿ ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡುವ ವ್ಯಕ್ತಿ ಅತ್ಯಾಚಾರಿ, ಪೋಕ್ಸೊ ಅಡಿಯಲ್ಲಿ ಆರೋಪಿಯಾಗಿದ್ದಾನೆ ಮತ್ತು ನೀವು ಹೇಳಿರುವ ಮತ್ತು ಅನುಮೋದಿಸಿದಂತೆ ಫಿಸಿಯೋಥೆರಪಿಸ್ಟ್ ಅಲ್ಲ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಟ್ವೀಟ್ ಮಾಡಿದ್ದಾರೆ.
ಎಎಪಿ ನಾಯಕ ಹಾಸಿಗೆಯ ಮೇಲೆ ಮಲಗಿ ಕಾಲು ಮಸಾಜ್ ಮಾಡಿಸಿಕೊಂಡಿರುವ ವಿಡಿಯೊಗಳು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಜೈನ್ (58) ಕೆಲ ದಾಖಲೆಗಳನ್ನು ಓದುತ್ತಿದ್ದಾರೆ ಮತ್ತು ಬಿಳಿ ಟಿ-ಶರ್ಟ್‌ನ ವ್ಯಕ್ತಿಯೊಬ್ಬರು ಅವರ ಕಾಲುಗಳಿಗೆ ಮಸಾಜ್ ಮಾಡುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ದೃಶ್ಯಾವಳಿಗಳು ತಿಹಾರ್ ಜೈಲಿನ ಜೈಲ್ ನಂ.7 ದಾಗಿವೆ. ದೆಹಲಿ ಕಾರಾಗೃಹ ಇಲಾಖೆಯು ಕೇಜ್ರಿವಾಲ್ ನೇತೃತ್ವದ ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತದೆ.
ಈ ವಿಡಿಯೊಗೆ ಪ್ರತಿಕ್ರಿಯಿಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬೆನ್ನುಮೂಳೆಯ ಗಾಯದ ಕಾರಣದಿಂದ ಜೈನ್ ಫಿಸಿಯೋಥೆರಪಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು. ಅಕ್ರಮವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳ ಬಗ್ಗೆ ಬಿಜೆಪಿ ಚಿಲ್ಲರೆ ರಾಜಕೀಯ ಮಾಡುತ್ತಿದೆ ಎಂದು ಸಿಸೋಡಿಯಾ ಆರೋಪಿಸಿದ್ದರು.
ಈ ಹಿಂದೆ, ಜೈನ್‌ಗೆ ವಿಶೇಷ ಆತಿಥ್ಯ ನೀಡುವಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಿಹಾರ್ ಜೈಲು ಅಧೀಕ್ಷಕರನ್ನು ಅಮಾನತುಗೊಳಿಸಲಾಗಿತ್ತು. ತಿಹಾರ್ ಜೈಲಿನಲ್ಲಿ ಜೈನ್ ವಿವಿಐಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ದೆಹಲಿ ಮುಖ್ಯ ಕಾರ್ಯದರ್ಶಿಯಿಂದ ಸಮಗ್ರ ವರದಿಯನ್ನು ಕೇಳಿದೆ.
ಇದನ್ನೂ ಓದಿ: ಭರ್ಜರಿ ಆತಿಥ್ಯ.. ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್- ಸಿಸಿಟಿವಿ ವಿಡಿಯೋ