ಅಯೋಧ್ಯೆ(ಉತ್ತರ ಪ್ರದೇಶ): ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ರಾಮ ಮಂದಿರದ ವಿನ್ಯಾಸಕ್ಕಾಗಿ ವೃತ್ತಿಪರರಿಂದ ವಾಸ್ತುಶಿಲ್ಪ ವಿನ್ಯಾಸ ಸಲಹೆಗಳನ್ನು ಆಹ್ವಾನಿಸಿದೆ.
"70 ಎಕರೆಗಳಲ್ಲಿ ರಾಮ ಮಂದಿರ ಸಂಕೀರ್ಣಕ್ಕೆ ಸಿದ್ಧತೆ ನಡೆಸುತ್ತಿರುವ ಮಾಸ್ಟರ್‌ಪ್ಲಾನ್‌ನಲ್ಲಿ ಸಾರ್ವಜನಿಕ ಒಳಿತಿಗಾಗಿ ಸೇರಿಸಬಹುದಾದ ಸಲಹೆಗಳನ್ನು ಟ್ರಸ್ಟ್ ಆಹ್ವಾನಿಸುತ್ತದೆ" ಎಂದು ಹೇಳಿದೆ.
ಟ್ರಸ್ಟ್, ಟಾಟಾ ಕನ್ಸಲ್ಟಿಂಗ್ ಮತ್ತು ಎಂಜಿನಿಯರಿಂಗ್ ಸಂಸ್ಥೆಯ ತಜ್ಞರು ಮತ್ತು ಎಂಜಿನಿಯರ್‌ಗಳನ್ನು ದೇವಾಲಯದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ದೇವಾಲಯದ ಪ್ರತಿಷ್ಠಾನಕ್ಕೆ ಸಂಬಂಧಿಸಿದಂತೆ ಐಐಟಿ-ರೂರ್ಕಿ ಮತ್ತು ಐಐಟಿ-ಮದ್ರಾಸ್‌ನಿಂದ ತಜ್ಞರ ಸಲಹೆಗಳನ್ನು ಸಹ ಕೋರಿದೆ.
ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಲು ಬಯಸಿದ್ದು, ಕನಿಷ್ಠ 1,000 ವರ್ಷಗಳವರೆಗೆ ಇರಬೇಕು ಮತ್ತು ಯಾವುದೇ ನೈಸರ್ಗಿಕ ವಿಪತ್ತುಗಳಿಂದಲೂ ಹಾನಿಯಾಗಬಾರದು. ಅಂತಹ ದೇವಾಲಯ ನಿರ್ಮಾಣಕ್ಕೆ ಬಯಸಿದ್ದೇವೆ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದ್ದಾರೆ.
ರಾಮ ಮಂದಿರ ಟ್ರಸ್ಟ್‌ನ ಟ್ರಸ್ಟಿ ಡಾ.ಅನಿಲ್ ಮಿಶ್ರಾ ಮಾತನಾಡಿ, ರಾಮ ದೇವಾಲಯದ ಮಾಸ್ಟರ್‌ಪ್ಲಾನ್‌ನಲ್ಲಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ವಿಶ್ವದಾದ್ಯಂತ ತಜ್ಞರಿಂದ ವಿಚಾರಗಳನ್ನು ಆಹ್ವಾನಿಸಿದೆ. ಈ ಸಲಹೆಗಳು ಯೋಜನೆಯ ಪ್ರಮುಖ ಅಂಶಗಳಾದ ಧಾರ್ಮಿಕ ಯಾತ್ರೆ, ಆಚರಣೆಗಳು, ಸಂಸ್ಕೃತಿ ತಿಳಿಸಬೇಕು ಎಂದಿದ್ದಾರೆ. ತಜ್ಞರು, ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕಾರರು ತಮ್ಮ ಸಲಹೆಯನ್ನು ನವೆಂಬರ್ 25 ರೊಳಗೆ ಟ್ರಸ್ಟ್‌ನ ಇ-ಮೇಲ್‌ಗಳಾದ aida.rjbayodhya@gmail.com ಮತ್ತು design@tce.co.in ನಲ್ಲಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.