ನವದೆಹಲಿ : ಮಣಿಪುರದ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದ ನಂತರ ಚಿತ್ರೋದ್ಯಮಕ್ಕೆ ಸಹಾಯ ಮಾಡಲು ಪರವಾನಗಿ ಪ್ರಕ್ರಿಯೆ ಸರಳಗೊಳಿಸುವ ಮತ್ತು ಸಿನಿಮಾ ಪೈರಸಿ ತಡೆಯುವ ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ 2023 ಅನ್ನು ಗುರುವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು.
ಪೈರಸಿಗೆ 3 ವರ್ಷ ಜೈಲು: ಸಿನಿಮಾಟೋಗ್ರಾಫ್ ತಿದ್ದುಪಡಿ ವಿಧೇಯಕ 2023ರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜು ಜನತಾದಳದ ನಾಯಕ ಪ್ರಶಾಂತ್ ನಂದಾ, "ಕಳೆದ ಐವತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಮಗೆ ಬಾಂಧವ್ಯವಿದೆ. ಅವರು ಚಲನಚಿತ್ರಗಳನ್ನು ನಿರ್ಮಿಸುವ ಜೊತೆಗೆ ಪೈರಸಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯಾವುದೇ ಹಿಂದಿ ಚಿತ್ರ ಬಿಡುಗಡೆಯಾದ ಮರುದಿನವೇ ಪೈರಸಿಯಿಂದಾಗಿ ದುಬೈನಲ್ಲಿ ಪ್ರದರ್ಶನ ಆರಂಭವಾಗುತ್ತದೆ. ಈ ಮಸೂದೆಯಡಿ ನಕಲು ಮಾಡಿರುವ ಆರೋಪ ಸಾಬೀತಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಚಲನಚಿತ್ರ ನಿರ್ಮಾಣ ವೆಚ್ಚದ ಶೇಕಡಾ 5ರಷ್ಟು ದಂಡ ವಿಧಿಸಲು ಸರ್ಕಾರ ಅವಕಾಶ ಕಲ್ಪಿಸಿದೆ" ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, "ಭಾರತೀಯ ಚಲನಚಿತ್ರೋದ್ಯಮವನ್ನು ಪೈರಸಿ ಗೆದ್ದಲಿನಂತೆ ತಿನ್ನುತ್ತಿದೆ. ಅದನ್ನು ತಡೆಯಲು ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ ತರಲಾಗಿದೆ. ಇದರಿಂದ ಚಿತ್ರೋದ್ಯಮಕ್ಕೆ ಲಾಭವಾಗುತ್ತದೆ. ಕಳೆದ ನಾಲ್ಕು ದಶಕಗಳಲ್ಲಿ ಸಿನಿಮಾ ರಂಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ವೀಕ್ಷಕರ ಸಂಖ್ಯೆಯೂ ಸಾಕಷ್ಟು ಹೆಚ್ಚಾಗಿದೆ. ಭಾರತೀಯ ಚಿತ್ರಗಳ ವಿಶ್ವಾಸಾರ್ಹತೆಯೂ ಸಾಕಷ್ಟು ಹೆಚ್ಚಿದೆ. ಇಂದು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುವ ದೇಶವಾಗಿದೆ. ಈ ಮಸೂದೆಯನ್ನು ಯಾವುದೇ ಚಲನಚಿತ್ರ ನಿರ್ಮಾಪಕ ಅಥವಾ ನಿರ್ದೇಶಕರ ಪರವಾಗಿ ತರಲಾಗಿಲ್ಲ. ಸ್ಪಾಟ್ ಬಾಯ್, ಸ್ಟಂಟ್ ಮ್ಯಾನ್‌ನಿಂದ ನೃತ್ಯ ಸಂಯೋಜಕರವರೆಗೆ ಚಿತ್ರರಂಗಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಹಿತದೃಷ್ಟಿಯಿಂದ ಬಿಲ್ ಜಾರಿಗೆ ತರಲಾಗಿದೆ" ಎಂದರು.
ಬಳಿಕ, ಮಸೂದೆಯಲ್ಲಿ ಪ್ರಮಾಣ ಪತ್ರದ ಅವಧಿಯನ್ನು ವಿಸ್ತರಿಸಿರುವ ಕ್ರಮ ಸ್ವಾಗತಾರ್ಹ ಎಂದು ವೈಎಸ್‌ಆರ್ ಕಾಂಗ್ರೆಸ್‌ನ ಸದಸ್ಯ ಎಸ್.ನಿರಂಜನ್ ರೆಡ್ಡಿ ಹೇಳಿದರು.
ಇದನ್ನೂ ಓದಿ : ಮಣಿಪುರ ಸಂಘರ್ಷಕ್ಕೆ ಅಧಿವೇಶನ ಬಲಿ: ಸುಗಮ ಕಲಾಪಕ್ಕಾಗಿ ವಿಪಕ್ಷ ನಾಯಕರಿಗೆ ಪತ್ರ ಬರೆದ ಅಮಿತ್ ಶಾ
ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ 2023 10 ವರ್ಷಗಳ ಮಾನ್ಯತೆಯ ಅವಧಿಯನ್ನು ತೆಗೆದುಹಾಕುವ ಮೂಲಕ ಶಾಶ್ವತ ಮಾನ್ಯತೆ ಹೊಂದಿರುವ ಚಲನಚಿತ್ರಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಪ್ರಮಾಣಪತ್ರವನ್ನು ನೀಡಲು ಅವಕಾಶ ನೀಡುತ್ತದೆ. ಚಲನಚಿತ್ರ ಪೈರಸಿಯನ್ನು ತಡೆಯುವ ಪ್ರಯತ್ನವಾಗಿ ಸಿನಿಮಾಗಳ ಅನಧಿಕೃತ ರೆಕಾರ್ಡಿಂಗ್ (ವಿಭಾಗ 6AA) ಮತ್ತು ಅವುಗಳ ಪ್ರದರ್ಶನವನ್ನು (ವಿಭಾಗ 6AB) ನಿಷೇಧಿಸುವ ನಿಬಂಧನೆಗಳೊಂದಿಗೆ ಸಿನಿಮಾಟೋಗ್ರಾಫ್ ಕಾಯ್ದೆಯಲ್ಲಿ ಹೊಸ ವಿಭಾಗಗಳನ್ನು ಪರಿಚಯಿಸಲಾಗಿದೆ.