ಮುಂಬೈ : ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಡೆಲ್ ಸಾಗರಿಕಾ ಸುಮನ್ ಮತ್ತೊಂದು ಆರೋಪ ಮಾಡಿದ್ದಾರೆ. ರಾಜ್ ಕುಂದ್ರಾ ಅವರ ತಂಡ ಬಿಗ್ಬಾಸ್ ಸ್ಪರ್ಧಿಗಳನ್ನು ಟಾರ್ಗೆಟ್ ಮಾಡುತ್ತಿತ್ತು. ಬಿಗ್ಬಾಸ್ ಸ್ಪರ್ಧಿ ಆರ್ಷಿ ಖಾನ್ಗೂ ಕುಂದ್ರಾ ಕಂಪನಿ ಆಫರ್ ನೀಡಿತ್ತು. ಆದರೆ, ಆಕೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಹಿನ್ನೆಲೆ ಕೈ ಬಿಡಲಾಗಿತ್ತು ಎಂದು ಸುಮನ್ ಆರೋಪಿಸಿದ್ದಾರೆ.
ಇತ್ತೀಚೆಗೆ ವಿಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದ ಶೋನಾ ಸುಮನ್, ರಾಜ್ಕುಂದ್ರಾ ಮತ್ತು ಅವರ ಗೆಳೆಯರ ವಿರುದ್ಧ ಆರೋಪಗಳನ್ನು ಮಾಡಿದ್ದರು. ರಾಜ್ ಕುಂದ್ರಾ ವೆಬ್ ಸೀರಿಸ್ನಲ್ಲಿ ನಟಿಸಲು ನನಗೆ ಅವಕಾಶ ಕೊಟ್ಟಿದ್ದರು. ಆದರೆ, ನನಗೆ ನಗ್ನವಾಗಿ ಆಡಿಷನ್ ಕೊಡುವಂತೆ ಕೇಳಿಕೊಂಡಿದ್ದರು.
ಆಗಸ್ಟ್ 2020 ರಲ್ಲಿ ನನಗೆ ವಿಡಿಯೋ ಕಾಲ್ ಮಾಡಿದ್ದ ಉಮೇಶ್ ಕಾಮತ್ ಎಂಬಾತ, ಕುಂದ್ರಾ ವೆಬ್ ಸೀರಿಸ್ನಲ್ಲಿ ನಟಿಸಲು ನಗ್ನವಾಗಿ ಆಡಿಷನ್ ಕೊಡುವಂತೆ ಒತ್ತಾಯಿಸಿದ್ದ ಎಂದು ಸುಮನ್ ಆರೋಪಿಸಿದ್ದರು. ಕಳೆದ ಫೆಬ್ರವರಿಯಲ್ಲಿ ಮಾಧ್ಯಮಗೋಷ್ಠಿ ಕರೆದಿದ್ದ ಸುಮನ್ ಇದೇ ಆರೋಪ ಮಾಡಿದ್ದರು.
ಓದಿ : ಮುಂಬೈ ಕ್ರೈಂ ಬ್ರಾಂಚ್ ದಾಳಿ ವೇಳೆ ಶಿಲ್ಪಾಶೆಟ್ಟಿ ಕಣ್ಣೀರು.. ಪತಿ ನಡತೆಗೆ ಆಕ್ರೋಶ!
ಕೆಲ ದಿನಗಳ ಹಿಂದೆ, ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಯ ಮತ್ತು ಅಶ್ಲೀಲ ಕರೆಗಳು ಬರುತ್ತಿವೆ ಎಂದು ಸುಮನ್ ಮುಂಬೈನ ಒಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ರಾಜ್ಕುಂದ್ರಾ ಮತ್ತು ಇತರರ ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡಿದ್ದು, ಕೋರ್ಟ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ನಾಳೆ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.