ನವದೆಹಲಿ: ಉತ್ತರ ಪ್ರದೇಶದ ಲಖಿಂಪುರಕ್ಕೆ ತೆರಳಲು ನಿರ್ಧರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗಕ್ಕೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿದೆ.
ಕಳೆದ ಭಾನುವಾರ 8 ಮಂದಿ ಸಾವಿಗೀಡಾದ ಸಂಬಂಧ ಲಖಿಂಪುರ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿರೋಧ ಪಕ್ಷದ ನಾಯಕರು ಘಟನಾ ಸ್ಥಳಕ್ಕೆ ತೆರಳುವುದನ್ನು ಸರ್ಕಾರ ತಡೆಯುತ್ತಿದೆ.
ಇದಕ್ಕೂ ಮುನ್ನ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದ ಕಾಂಗ್ರೆಸ್, ರಾಹುಲ್ ಗಾಂಧಿ ನೇತೃತ್ವದ ಐವರು ಸದಸ್ಯರ ನಿಯೋಗ ಲಖಿಂಪುರ ಜಿಲ್ಲೆಗೆ ಭೇಟಿ ನೀಡಲು ನಿರ್ಧರಿಸಿದ್ದು ಅನುಮತಿ ಕೋರಿತ್ತು. ಈ ಪತ್ರದಲ್ಲಿ ಯಾವುದೇ ಕಾರಣ ಅಥವಾ ಸ್ಪಷ್ಟನೆ ನೀಡದೆ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವುದಕ್ಕೆ ಅಸಮಾಧಾನವನ್ನೂ ವ್ಯಕ್ತಪಡಿಸಿತ್ತು.
ಕಾಂಗ್ರೆಸ್ ನಿಯೋಗಕ್ಕೆ ಅನುಮತಿ ನಿರಾಕರಿಸಿದ ಯೋಗಿ ಸರ್ಕಾರ, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿರುವುದಾಗಿ ಸಬೂಬು ನೀಡಿದೆ.
ಇದನ್ನೂ ಓದಿ: ಅತ್ಯಾಚಾರಿಗೆ ಕೇವಲ 9 ದಿನದಲ್ಲಿ ಶಿಕ್ಷೆ ನೀಡಿದ ಕೋರ್ಟ್