ಹೈದರಾಬಾದ್: ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅಗತ್ಯವಾದ ತರಬೇತಿ ಪಡೆದಿರಬೇಕಾಗುತ್ತದೆ. ಆದರೆ, ಯಾವಾಗಲೂ ಪೂಜೆ - ಪುನಸ್ಕಾರ, ವೇದಪಾಠ, ಮಂತ್ರ-ಸ್ತೋತ್ರ, ಶ್ಲೋಕ ಪಠಣದಲ್ಲಿ ತೊಡಗಿರುವ ಅರ್ಚಕರು ನಾವ್ಯಾರಿಗೂ ಕಮ್ಮಿ ಇಲ್ಲ, ಆಸಕ್ತಿ ಇದ್ದರೇ ಏನನ್ನಾದರೂ ಮಾಡಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ.
ಹೌದು.. ಆಂಧ್ರಪ್ರದೇಶದಲ್ಲಿ ಪ್ರತಿವರ್ಷ ರಾಜ್ಯಮಟ್ಟದ 'ಪುರೋಹಿತ್ ಕ್ರಿಕೆಟ್ ಲೀಗ್' (ಪಿಸಿಎಲ್) ನಡೆಯುತ್ತದೆ. ವಿಜೇತ ತಂಡಕ್ಕೆ 60,000 ರೂ. ನಗದು ಬಹುಮಾನ ನೀಡಲಾಗುತ್ತದೆ. ಇದನ್ನ 9 ವರ್ಷಗಳ ಹಿಂದೆ ಆಂಧ್ರದ ರಾಜಮಂಡ್ರಿಯಲ್ಲಿ ಪತ್ರಕರ್ತರೊಬ್ಬರು ಪ್ರಾರಂಭಿಸಿದ್ದರು.
ಇದನ್ನೂ ಓದಿ: ಫಿಟ್ನೆಸ್ ನೆಪದಲ್ಲಿ ಬೆಂಚ್ ಕಾದ ವಿಲಿಯಮ್ಸನ್; ಹೈದ್ರಾಬಾದ್ ಅಭಿಮಾನಿಗಳ ಅಸಮಾಧಾನ
ವೇದ ಜ್ಞಾನ - ಶ್ಲೋಕಗಳಲ್ಲಿ ಪಾಂಡಿತ್ಯ ಹೊಂದಿರುವ ಅರ್ಚಕರು ಮತ್ತು ಪೂಜಾರಿಗಳನ್ನು ಸಂಘಟಕರು ಪಿಸಿಎಲ್ಗೆ ಆಯ್ಕೆ ಮಾಡುತ್ತಾರೆ. ಇಂತಹ ಅರ್ಚಕರು ತಂಡಗಳನ್ನು ಕಟ್ಟಿಕೊಂಡು ಬಳಿಕ ಕ್ರಿಕೆಟ್ ಅಭ್ಯಾಸ ಮಾಡುತ್ತಾರೆ. ಶುಭಮುಹೂರ್ತಗಳು ಇಲ್ಲದಿರುವ ತಿಂಗಳಿನಲ್ಲಿ ಪಂದ್ಯಾವಳಿ ಹಮ್ಮಿಕೊಳ್ಳಲಾಗುತ್ತದೆ.
ಕಳೆದ ವರ್ಷ ಕೊರೊನಾ ಸಾಂಕ್ರಾಮಿಕದಿಂದಾಗಿ ಪಿಸಿಎಲ್ ನಡೆದಿರಲಿಲ್ಲ. ಈ ಬಾರಿ ಭೀಮಾವರಂ, ಕಾಕಿನಾಡ ಮತ್ತು ರಾಜಮಂಡ್ರಿಯಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸಲಾಯಿತು. ಜನವರಿಯಿಂದ ಮಾರ್ಚ್ ವರೆಗೆ ನಡೆದ ಪಂದ್ಯಗಳಲ್ಲಿ ಪೂರ್ವ ಮತ್ತು ಪಶ್ಚಿಮ ಗೋದಾವರಿ, ವಿಜಯವಾಡ, ತಿರುಪತಿ, ವಿಶಾಖಪಟ್ಟಣ, ಹೈದರಾಬಾದ್ ಸೇರಿದಂತೆ ವಿವಿಧ ಜಿಲ್ಲೆಗಳ 16 ತಂಡಗಳು ಭಾಗವಹಿಸಿದ್ದವು. ಧರ್ಮಗಿರಿ ವೈದಿಕ ಶಾಲೆಯ ಪುರೋಹಿತರು ಈ ಬಾರಿ ಕಪ್ ಗೆದ್ದಿದ್ದಾರೆ.