ಕಪುರ್ತಲಾ (ಪಂಜಾಬ್): ಪಂಜಾಬ್ನ ಕಪುರ್ತಲಾ ಜಿಲ್ಲೆಯ ಹುಡುಗಿ ಇದೀಗ ಭಾರತ ಹೆಮ್ಮೆ ಪಡುವ ಸಾಧನೆಯನ್ನು ವಿದ್ಯಾಭ್ಯಾಸದಲ್ಲಿ ಮಾಡಿದ್ದು, ಇಟಲಿಯ ಅಧ್ಯಕ್ಷರಿಂದ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಇಟಲಿಯ ಟಾಪ್-25 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಕಪುರ್ತಲಾ ಜಿಲ್ಲೆಯ ಸುನಂದನ್‌ವಾಲಾ ಗ್ರಾಮದ ಗುರ್ಜಿತ್ ಕೌರ್ ಹೆಸರಿದ್ದು, ಇಟಾಲಿಯನ್ ಶಾಲೆಯೊಂದು ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಸಮಾರಂಭದಲ್ಲಿ ಇಟಲಿ ಅಧ್ಯಕ್ಷ ಸೆರ್ಗಿಯೊ ಮಾಟರೆಲ್ಲಾ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಗುರ್ಜಿತ್ಳ ಪೋಷಕರು ಇಟಲಿಯಲ್ಲಿ ನೆಲೆಸಿದ್ದು, ಕಳೆದ 13 ವರ್ಷಗಳಿಂದ ಆಕೆ ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಇದೀಗ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾಳೆ. 13 ವರ್ಷಗಳಿಂದಲೂ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುತ್ತಾ ಬಂದಿದ್ದಾಳೆ.
ರೋಮ್‌ನ ಕ್ಯಾಥೋಲಿಕ್ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ತನ್ನ ಮುಂದಿನ ವಿದ್ಯಾಭ್ಯಾಸ ಪ್ರಾರಂಭಿಸಿದ್ದಾಳೆ. ಬಾಲಕಿಯ ತಂದೆ ಜಸ್ವಂತ್ ಸಿಂಗ್ ದಕ್ಷಿಣ ಇಟಾಲಿಯನ್ ರಾಜ್ಯವಾದ ಪಾಲಿನೇಷಿಯಾದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ತಮ್ಮ ಮಗಳು ರಾಷ್ಟ್ರಮಟ್ಟದಲ್ಲಿ ಗೌರವಿಸಲ್ಪಟ್ಟಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ ಎನ್ನುತ್ತಾರೆ ಜಸ್ವಂತ್ ಸಿಂಗ್.
ತಮ್ಮ ಮಗಳು ಈ ಪ್ರದೇಶದಲ್ಲಿ ವಾಸಿಸುವ ಇತರ ಪಂಜಾಬಿ ಕುಟುಂಬಗಳಿಗೆ ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದ ದಾಖಲೆಗಳಿಗೆ ಸಹಾಯ ಮಾಡುತ್ತಾಳೆ. ಹೆಚ್ಚಿನ ಶಿಕ್ಷಣವನ್ನು ಪಡೆಯುವ ಮೂಲಕ ಆಕೆ ದೇಶದ ಜನರಿಗೆ ಸೇವೆ ಸಲ್ಲಿಸಬೇಕು ಎಂದು ಆಕೆಯ ತಾಯಿ ಮಂಜೀತ್ ಕೌರ್ ಹೇಳಿದ್ದಾರೆ.