ಪುಣೆ: 28 ವರ್ಷದ ಮಹಿಳೆಯೊಬ್ಬರ ಮೇಲೆ ವಾಮಾಚಾರದ ಕೃತ್ಯಗಳನ್ನು ಮಾಡಿದ ಆರೋಪದ ಮೇಲೆ ಇಲ್ಲಿನ ಸಿಂಹಗಢ ಪೊಲೀಸರು 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗರ್ಭಿಣಿಯಾಗಲು ಹಾಗೂ ಆ ಮೂಲಕ ಮನೆಗೆ ಸಮೃದ್ಧಿ ತರುವಂತಾಗಲು ಮಾನವ ಚಿತಾಭಸ್ಮ ಸೇವಿಸುವಂತೆ ಮಾಡಿದ್ದಾರೆ ಎಂದು ವಾಮಾಚಾರ ಸಂತ್ರಸ್ತ ಮಹಿಳೆ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.
ಪುಣೆಯ ಧೈರಿ ಪ್ರದೇಶದಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಮಹಿಳೆಗೆ ಕಳೆದ ಮೂರು ವರ್ಷಗಳಿಂದ ಆಕೆಯ ಕುಟುಂಬದವರು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿ ಕುಟುಂಬಸ್ಥರು ಸಂತ್ರಸ್ತೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯಾದ ಹಲವು ತಿಂಗಳ ನಂತರ ಮಹಿಳೆ ಮಗುವನ್ನು ಹೆರಲು ವಿಫಲವಾದಾಗ ದೌರ್ಜನ್ಯ ತೀವ್ರಗೊಂಡಿತು ಎಂದು ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಮಕ್ಕಳಿಗಾಗಿ ವಾಮಾಚಾರಕ್ಕೆ ಮೊರೆ: ಮಹಿಳೆಗೆ ಮಕ್ಕಳಾಗದಿದ್ದಾಗ ಕುಟುಂಬಸ್ಥರು ವಾಮಾಚಾರಾದ ಮೊರೆ ಹೋಗಿದ್ದಾರೆ. ಮಾನವ ಮತ್ತು ಪ್ರಾಣಿಗಳ ಬಲಿಗಳನ್ನು ಒಳಗೊಂಡ ಅಘೋರಿ ಪೂಜೆಗಳನ್ನು ಮಹಿಳೆಯ ಮೇಲೆ ಮಾಡಲಾರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ಮನೆಯವರು ಇದೇ ರೀತಿಯ ವಿಧಿ ವಿಧಾನ ನಡೆಸಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಆಚರಣೆ ಆಡು ಮತ್ತು ಕೋಳಿಗಳ ಬಲಿ ಒಳಗೊಂಡಿರುತ್ತದೆ. ಈ ವಾಮಾಚಾರದ ಕೊನೆಯಲ್ಲಿ ಮಾನವ ಚಿತಾಭಸ್ಮ ಸೇವಿಸುವಂತೆ ಸಂತ್ರಸ್ತೆಗೆ ಒತ್ತಾಯಿಸಲಾಯಿತು. ಈ ಎಲ್ಲ ಸಂಕಷ್ಟಗಳನ್ನು ಎದುರಿಸಿ ರೋಸಿ ಹೋದ ಮಹಿಳೆ ಕೊನೆಗೆ ಸಿಂಹಗಢ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಭಾರತೀಯ ದಂಡದ ಸೆಕ್ಷನ್ 498 (ಎ), 323, 504,506/2, 34 ರ ಮಹಾರಾಷ್ಟ್ರ ಮಾನವ ಬಲಿ ಮತ್ತು ಅಮಾನವೀಯ ಅಘೋರಿ ಆಚರಣೆಗಳು ಮತ್ತು ವಾಮಾಚಾರ ಕಾಯ್ದೆ 3 ರ ಅಡಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಹೆಸರಿಸಲಾದ 8 ಆರೋಪಿಗಳನ್ನು ಸಂತ್ರಸ್ತೆಯ ಪತಿ ಜಯೇಶ್ ಪೋಕ್ಲೆ, ಸೋದರ ಮಾವ ಶ್ರೇಯಸ್ ಪೋಕ್ಲೆ, ಅತ್ತಿಗೆ ಇಶಾ ಪೋಕ್ಲೆ, ಮಾವ ಕೃಷ್ಣ ಪೋಕ್ಲೆ, ಅತ್ತೆ ಪ್ರಭಾವತಿ ಪೋಕ್ಲೆ, ಕುಟುಂಬದ ಇಬ್ಬರು ಪರಿಚಯಸ್ಥರಾದ ದೀಪಕ್ ಜಾಧವ್ ಮತ್ತು ಬಾಟಾ ಜಾಧವ್ ಎಂದು ಗುರುತಿಸಲಾಗಿದೆ. ಎಲ್ಲರೂ ಪುಣೆ ನಿವಾಸಿಗಳು.
ಮಹಿಳಾ ಆಯೋಗಕ್ಕೆ ತಲುಪಿದ ವಿಷಯ: ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಕೂಡ ಈ ವಿಷಯದ ಬಗ್ಗೆ ಗಮನಹರಿಸಿದೆ. ಆಯೋಗದ ಮುಖ್ಯಸ್ಥೆ ರೂಪಾಲಿ ಚಕನ್ಕರ್ ಘಟನೆಯ ಬಗ್ಗೆ ಟ್ವಿಟರ್ನಲ್ಲಿ ಬರೆದಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಪುಣೆಯಲ್ಲಿ ಮಹಿಳೆಯೊಬ್ಬರಿಗೆ ಮಗುವಾಗಲಿಲ್ಲ ಎಂಬ ಕಾರಣಕ್ಕೆ ಬಲವಂತವಾಗಿ ಮಾನವನ ಚಿತಾಭಸ್ಮ ತಿನ್ನುವಂತೆ ಮಾಡಲಾಗಿತ್ತು. ಶಿಕ್ಷಣದ ತವರೂರು ಎಂದೇ ಖ್ಯಾತಿ ಪಡೆದಿರುವ ಪುಣೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ಖಂಡನೀಯ ಹಾಗೂ ಅಮಾನವೀಯ.
ರಾಜ್ಯ ಮಹಿಳಾ ಆಯೋಗವು ಈ ವಿಷಯವನ್ನು ಅರಿತು, ತಕ್ಷಣ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ಸಿಂಹಗಢ ರಸ್ತೆ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಚಕನ್ಕರ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಾಮಾಚಾರ ಆರೋಪ: ಅತ್ತಿಗೆಯನ್ನು ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಮೈದುನ!