ಶ್ರೀನಗರ(ಜಮ್ಮು ಕಾಶ್ಮೀರ): ದೇಶವನ್ನು ದುಃಖದಲ್ಲಿ ಮುಳುಗಿಸಿದ ಪುಲ್ವಾಮಾ ದಾಳಿ ನಡೆದು ನಿನ್ನೆಗೆ(ಸೋಮವಾರ) ಮೂರು ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಇಬ್ಬರು ಮಾಜಿ ಸಿಎಂಗಳಾದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಭದ್ರತಾ ಕಾರಣಗಳನ್ನು ನೀಡಿ ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿದ್ದು, 'ಇದೊಂದು ಅಕ್ರಮ ಬಂಧನ' ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಜಮ್ಮು ಕಾಶ್ಮೀರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
'ಫಾರೂಕ್ ಅಬ್ದುಲ್ಲಾ ಅವರ ಅಕ್ರಮ ಬಂಧನವನ್ನು ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಬಲವಾಗಿ ಖಂಡಿಸುತ್ತದೆ. ಈ ಬಂಧನಕ್ಕೆ ಯಾವುದೇ ಸಮರ್ಥನೆ ಇಲ್ಲ' ಎಂದು ಎನ್‌ಸಿ ವಕ್ತಾರ ಇಮ್ರಾನ್ ನಬಿ ದಾರ್ ಪಕ್ಷದಿಂದ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಜೋಡಿಹಕ್ಕಿಗಳಿಗೆ ಜೀವ ಬೆದರಿಕೆ: ರಕ್ಷಣೆಗಾಗಿ ಕೇಂದ್ರದ ಮೊರೆ ಹೋದ ದಂಪತಿ
ಫಾರೂಕ್ ಅಬ್ದುಲ್ಲಾ ಕಾರ್ಯಕ್ರಮವೊಂದಕ್ಕೆ ಜಮ್ಮುವಿಗೆ ತೆರಳಬೇಕಾಗಿತ್ತು. ರಸ್ತೆ ಮಾರ್ಗದ ಮೂಲಕ ಅವರು ತೆರಳಲು ನಿರ್ಧರಿಸಿದ್ದರು. ಆದರೆ ಭದ್ರತಾ ಪಡೆಗಳು ಫಾರೂಕ್ ಅವರನ್ನು ಗೃಹಬಂಧನದಲ್ಲಿ ಇರಿಸಿವೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನೂ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪಕ್ಷದ ವಕ್ತಾರರಾದ ನಜ್ಮು ಸಾಕಿಬ್ ಈಟಿವಿ ಭಾರತಗೆ ತಿಳಿಸಿದ್ದಾರೆ.