ಹೈದರಾಬಾದ್: ಕೋಮು ಭಾವನೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಬಂಧಿತರಾಗಿ ಬಿಡುಗಡೆಯಾಗಿರುವ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ. ಸ್ವಯಂ ಘೋಷಿತ ಸಾಮಾಜಿಕ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತ ಸೈಯದ್ ಅಬ್ದಾಹು ಕಶಾಫ್ ಎಂಬುವವ ಶಾಸಕರ ವಿರುದ್ಧ ಘೋಷಣೆ ಕೂಗಿದ್ದಾನೆ. ಪ್ರತಿಭಟನೆ ವೇಳೆಯ ಈ ಪ್ರಚೋದಾನಾತ್ಮಕ ಹೇಳಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ವಿವಾದಾತ್ಮಕ ಹೇಳಿಕೆ ನೀಡಿದ ಸೈಯದ್ ಅಬ್ದಾಹು ಕಶಾಫ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದ ಐಟಿ ಸೆಲ್ ಮಾಜಿ ಮುಖ್ಯಸ್ಥನಾಗಿದ್ದಾನೆ. ಬಿಜೆಪಿ ಶಾಸಕ ರಾಜಾ ಸಿಂಗ್ ಅವರ ವಿರುದ್ಧ ಆಗಸ್ಟ್ 22 ರಂದು ಹೈದರಾಬಾದ್‌ನ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಕಚೇರಿ ಹೊರಗೆ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಗುಂಪಿನಲ್ಲಿದ್ದ ಸೈಯದ್ ಅಬ್ದಾಹು ಕಶಾಫ್ ಪ್ರಚೋದನಾತ್ಮಕ ಘೋಷಣೆ ಕೂಗಿದ್ದಾನೆ.
ವಿವಾದಾತ್ಮಕ ಕರೆ ನೀಡಿದ್ದನ್ನು ಸೈಯದ್ ಅಬ್ದಾಹು ಕಶಾಫ್ ಸಮರ್ಥಿಸಿಕೊಂಡಿದ್ದಾನೆ. ಪ್ರವಾದಿಯನ್ನು ಅಗೌರವಿಸುವ ವ್ಯಕ್ತಿಗೆ ಶಿಕ್ಷೆ ನೀಡಬೇಕಾಗಿದೆ. ಈ ಬಗ್ಗೆ ಯಾವುದೇ ಸಂದೇಹ ಬೇಡ. ನಾವು ಭಾರತದಲ್ಲಿ ಸಂವಿಧಾನದ ಅನುಸಾರ ವಾಸಿಸುತ್ತಿದ್ದೇವೆ. ರಾಜಾ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದೇವೆ. ರಾಜಾ ಸಿಂಗ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಾದದ ಹೇಳಿಕೆ ನೀಡಿದ ಸೈಯದ್ ಅಬ್ದಾಹು ಕಶಾಫ್ನನ್ನು ಬಂಧಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಕೇಳಿಬಂದಿದೆ.
ಓದಿ: ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ಮೊರೆತ.. ದಾಳಿಯಲ್ಲಿ ಇಬ್ಬರ ಸಾವು, ಮೂವರಿಗೆ ಗಾಯ