ನವದೆಹಲಿ: ಕೋವಿಡ್ ಪ್ರಕರಣಗಳ ಉಲ್ಬಣದಿಂದಾಗಿ ಉತ್ತರ ಪ್ರದೇಶ ಕಾಂಗ್ರೆಸ್ ತನ್ನ ಜಾಥಾಗಳು ಮತ್ತು ಮಹಿಳಾ ಮ್ಯಾರಥಾನ್ ರಾಜ್ಯದಲ್ಲಿ ರದ್ದುಗೊಳಿಸಿದ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದಿನಿಂದ ವರ್ಚುಯಲ್ ಪ್ರಚಾರ ಪ್ರಾರಂಭಿಸಿದ್ದಾರೆ.
ಮೂಲಗಳ ಪ್ರಕಾರ, ಪ್ರಿಯಾಂಕಾ ಅವರು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ‘ಲಡ್ಕಿ ಹೂ ಲಡ್ ಸಕ್ತಿ ಹೂ’ ಅಭಿಯಾನ ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿ ಪ್ರಿಯಾಂಕಾ ಗಾಂಧಿ ಸಾರ್ವಜನಿಕರಿಂದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಂವಹನ ನಡೆಸಲಿದ್ದಾರೆ.
ಓದಿ: ಬೆಂಗಳೂರಿನ ನಿರ್ಮಾಣ ಹಂತದ ಅಪಾರ್ಟ್ಮೆಂಟ್ನಲ್ಲಿ ಭಾರಿ ಅಗ್ನಿ ಅವಘಡ
ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಮಹಿಳಾ ಮ್ಯಾರಥಾನ್ ಮತ್ತು ಇತರ ರಾಜಕೀಯ ಕಾರ್ಯಕ್ರಮಗಳನ್ನು ಮುಂದೂಡುವುದಾಗಿ ಯುಪಿ ಕಾಂಗ್ರೆಸ್ ಬುಧವಾರ ಘೋಷಿಸಿತ್ತು. ರಾಜ್ಯ ಕಾಂಗ್ರೆಸ್‌ನ ಆಂತರಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಾಗಿ ಹೇಳಿದ್ದರು. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ರಾಜಕೀಯ ಸಭೆಗಳನ್ನು 15 ದಿನಗಳ ಕಾಲ ಮುಂದೂಡಲು ನಾಯಕರು ಸರ್ವಾನುಮತದಿಂದ ನಿರ್ಧರಿಸಿದ್ದರು.
ಯುಪಿ ಕಾಂಗ್ರೆಸ್‌ನ ಮೂಲಗಳ ಪ್ರಕಾರ, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ನಡೆಸಬೇಕಾಗಿದ್ದ ಇತರ ಜಾಥಾಗಳು ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಬೇಕಿದ್ದ ಯುವ ಸಂವಾದ್ ಕಾರ್ಯಕ್ರಮವನ್ನೂ ಸಹ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಇದೀಗ ಹಿರಿಯ ನಾಯಕರ ವರ್ಚುಯಲ್ ಪ್ರಚಾರದ ಹೊರತಾಗಿ ಗ್ರಾಮ ಮಟ್ಟದಲ್ಲಿ ಕಾರ್ನರ್ ಮೀಟಿಂಗ್, ಮನೆ - ಮನೆ ಪ್ರಚಾರಕ್ಕೂ ಕಾಂಗ್ರೆಸ್ ಮುಂದಾಗಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಈ ವರ್ಷ ನಡೆಯಲಿದೆ.