ಗೋಪಾಲ್‌ಗಂಜ್ (ಬಿಹಾರ): ಕೊಲೆ, ಸುಲಿಗೆ ಮಾಡಿ ಜೈಲು ಪಾಲಾಗಿರುವ ಕೈದಿಗಳಿಗೆ ರಾಜಾತಿಥ್ಯ, ಮೊಬೈಲ್ ಪೂರೈಕೆಯಂತಹ ಹಲವಾರು ಪ್ರಕರಣಗಳು ನಡೆದಿವೆ. ಅದೇ ರೀತಿ ಜೈಲಲ್ಲಿದ್ದ ಕೈದಿಯೊಬ್ಬ ತನ್ನಲ್ಲಿದ್ದ ಮೊಬೈಲ್ ಅಧಿಕಾರಿಗಳಿಗೆ ಸಿಗಬಾರದು ಎಂದು ನುಂಗಿದ್ದಾನೆ. ಅದಾದ ಮೇಲೆ ನೋಡಿ ಫಜೀತಿ ಶುರುವಾಗಿದ್ದು. ಮೊಬೈಲ್ ನುಂಗಿದ ಕೈದಿ ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದಾನೆ. ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಪೊಲೀಸರಿಗೆ ಅಸಲಿ ಸತ್ಯ ಗೊತ್ತಾಗಿದೆ.
ಇದೆಲ್ಲವೂ ನಡೆದಿದ್ದು, ಬಿಹಾರದ ಗೋಪಾಲಗಂಜ್ ಜಿಲ್ಲಾ ಕಾರಾಗೃಹದಲ್ಲಿ. ಕೈದಿಗಳ ಬಳಿ ಮೊಬೈಲ್ಗಳಿವೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಕೈದಿಯೊಬ್ಬ ಸಿಕ್ಕಿ ಬೀಳುವ ಭಯದಲ್ಲಿ ತನ್ನ ಬಳಿ ಇದ್ದ ಮೊಬೈಲ್ ಅನ್ನು ನುಂಗಿ ಹೊಟ್ಟೆ ಸೇರಿಸಿದ್ದಾನೆ. ಇದರಿಂದ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಆತನನ್ನು ಜೈಲು ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎಕ್ಸರೇ ಮಾಡಿದಾಗ ಹೊಟ್ಟೆಯಲ್ಲಿ ವಸ್ತು ಇರುವುದು ತಿಳಿದುಬಂದಿದೆ.
ಮೊಬೈಲ್ ನುಂಗಿದ ಕೈದಿಯನ್ನು ಖೈಸರ್ ಅಲಿ ಎಂದು ಗುರುತಿಸಲಾಗಿದೆ. ಈತ 2020 ರ ಜನವರಿಯಲ್ಲಿ ಮಾದಕವಸ್ತು ಪ್ರಕರಣದಲ್ಲಿ ಗೋಪಾಲಗಂಜ್ ಪೊಲೀಸರು ಬಂಧಿಸಿದ್ದರು. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಇದೇ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸುತ್ತಿದ್ದಾರೆ ಎಂಬ ಬಗ್ಗೆ ಜೈಲಿನ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಮೊಬೈಲ್ ಸಿಕ್ಕರೆ ತನ್ನ ವಿರುದ್ಧ ಕ್ರಮವಾಗುತ್ತದೆ ಎಂಬ ಭಯದಲ್ಲಿ ಅಲಿ ಅದನ್ನು ಹೊಟ್ಟೆಯೊಳಗೆ ನುಂಗಿದ್ದಾನೆ.
ಮರುದಿನ ಅಲಿಗೆ ಹೊಟ್ಟೆನೋವು ಉಂಟಾಗಿ ಒದ್ದಾಡಿದ್ದಾನೆ. ಜೈಲಿನಲ್ಲೇ ಚಿಕಿತ್ಸೆ ನೀಡಲಾಗಿದೆ. ಆದರೂ, ಕಡಿಮೆಯಾಗದ ಕಾರಣ ಪೊಲೀಸರು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಪಾಸಣೆ ನಡೆಸಿದಾಗ, ಹೊಟ್ಟೆಯಲ್ಲಿ ಮೊಬೈಲ್ ಇರುವುದು ಗೊತ್ತಾಗಿದೆ. ಪೊಲೀಸರು ಕೈದಿಯನ್ನು ವಿಚಾರಿಸಿದಾಗ ತನ್ನ ಬಳಿಕ ಇದ್ದ ಮೊಬೈಲ್ ಅನ್ನು ತಪಾಸಣೆ ವೇಳೆ ನುಂಗಿದ್ದಾಗಿ ಬಾಯ್ಬಿಟ್ಟಿದ್ದಾನೆ. ಹೊಟ್ಟೆಯಲ್ಲಿರುವ ಮೊಬೈಲ್ ಹೊರತೆಗೆಯಲು ಕೈದಿ ಅಲಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಮೊಬೈಲ್ ಹೊರತೆಗೆಯುವುದಾಗಿ ವೈದ್ಯರು ತಿಳಿಸಿದರು.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಗೋಪಾಲ್‌ಗಂಜ್ ಜೈಲು ಅಧೀಕ್ಷಕ ಮನೋಜ್ ಕುಮಾರ್, ಜೈಲಿನಲ್ಲಿರುವ ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಎಂಬ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಅದರಂತೆ ಪ್ರತಿ ಕೈದಿಯನ್ನು ತಪಾಸಣೆ ಮಾಡಲಾಯಿತು. ಈ ವೇಳೆ ಅಲಿ ತನ್ನಲ್ಲಿದ್ದ ಮೊಬೈಲ್ ಅನ್ನು ನುಂಗಿದ್ದ. ಮರುದಿನ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ವಿಷಯ ಹೊರಬಿದ್ದಿತು ಎಂದರು.
ಬಿಹಾರದಲ್ಲಿ ಕೈದಿಗಳು ಫೋನ್ ಬಳಸುತ್ತಿರುವ ಪ್ರಕರಣಗಳು ಹೊಸದೇನಲ್ಲ. ಕತಿಹಾರ್, ಬಕ್ಸಾರ್, ಗೋಪಾಲ್‌ಗಂಜ್, ನಳಂದ, ಹಾಜಿಪುರ್, ಹೌರಾ ಮತ್ತು ಜೆಹಾನಾಬಾದ್ ಜೈಲುಗಳಲ್ಲಿನ ಕೈದಿಗಳು ಮೊಬೈಲ್ ಬಳಕೆ ಮಾಡಿದ ಪ್ರಕರಣಗಳು ನಡೆದಿದ್ದವು. 2021 ರ ಮಾರ್ಚ್ನಲ್ಲಿ ನಡೆದ ಶೋಧಗಳಲ್ಲಿ ಅಧಿಕಾರಿಗಳು ಖೈದಿಗಳಿಂದ 35 ಸೆಲ್ ಫೋನ್‌ಗಳು, 7 ಸಿಮ್ ಕಾರ್ಡ್‌ಗಳು ಮತ್ತು 17 ಚಾರ್ಜರ್‌ಗಳನ್ನು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಆಸ್ತಿ ವಿವಾದ: ಅಣ್ಣನನ್ನೇ ಹೊಡೆದು ಕೊಂದ ತಮ್ಮಂದಿರು!