ನವದೆಹಲಿ: ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಇಂದು ಬೆಳಗ್ಗೆ ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಮತ್ತು ಮಧ್ಯಾಹ್ನ ಅಸ್ಸೋಂನ ಚಾಬುವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಚುನಾವಣೆ ಹಿನ್ನೆಲೆ ಈಗಾಗಲೇ ಉಭಯ ರಾಜ್ಯಗಳಲ್ಲಿ ಮೋದಿ ಸಾರ್ವಜನಿಕ ರ‍್ಯಾಲಿ ನಡೆಸಿ ಮಾತನಾಡಿದ್ದಾರೆ. ಕಳೆದ ವಾರ ಬಂಗಾಳದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, "ದಲಿತರು, ಹಿಂದುಳಿದ ಮತ್ತು ಆದಿವಾಸಿಗಳ ಬಗ್ಗೆ ಟಿಎಂಸಿ ಎಂದಿಗೂ ಮಾತನಾಡಿಲ್ಲ. ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಅಕ್ರಮ ನುಸುಳುವಿಕೆ ನಡೆಯುತ್ತಿದೆ. ಇದರ ಹಿಂದೆ ವೋಟ್ ಬ್ಯಾಂಕ್ ರಾಜಕಾರಣ ಇದೆ." ಎಂದು ವಾಗ್ದಾಳಿ ನಡೆಸಿದ್ದರು. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಸೋಲಿನ ಭೀತಿ ಶುರುವಾಗಿದ್ದು, ಅವರು ಹತಾಶೆ ಹೊರಹಾಕುತ್ತಿದ್ದಾರೆ. ಕಳೆದ 10 ವರ್ಷಗಳ ಅಧಿಕಾರದ ದುರುಪಯೋಗಕ್ಕೆ ಭಾರಿ ಬೆಲೆ ತೆರಲಿದ್ದಾರೆ ಎಂದು ನಮೋ ಎಚ್ಚರಿಸಿದರು. ಇಂದೂ ಸಹ ಮಮತಾ ವಿರುದ್ಧ ವಾಗ್ದಾಳಿ ಮುಂದುವರೆಸಲಿದ್ದಾರೆ.
ಶಾಂತಿಯುತ ಮತ್ತು ನ್ಯಾಯಯುತವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಪಶ್ಚಿಮ ಬಂಗಾಳದ ಮತದಾನ ಕೇಂದ್ರಗಳಲ್ಲಿ ಕೇಂದ್ರ ಪಡೆಗಳು ಹಾಜರಿರಬೇಕು ಮತ್ತು ಪ್ರತಿ ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಬೇಕು ಎಂದು ಬಂಗಾಳದಲ್ಲಿ ಬಿಜೆಪಿ ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಅಸ್ಸೋಂನ 126 ಸ್ಥಾನಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, 47 ಸ್ಥಾನಗಳಿಗೆ ಮಾರ್ಚ್ 27 ರಂದು, 39 ಸ್ಥಾನಗಳಿಗೆ ಏಪ್ರಿಲ್ 1 ಹಾಗೂ 40 ಸ್ಥಾನಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.
ಇನ್ನು ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಮತದಾನವಾಗಲಿದೆ. ಮೇ 2ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.