ಕಾನ್ಪುರ (ಉತ್ತರ ಪ್ರದೇಶ): ನಮ್ಮ ತೆರಿಗೆ ಹಣದಿಂದಲೇ ದೇಶದ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಹೀಗಾಗಿ ಯಾರೂ ಕೂಡ ರಾಷ್ಟ್ರದ ಸಂಪನ್ಮೂಲಗಳನ್ನು ನಾಶಮಾಡಬಾರದು, ಅವುಗಳನ್ನು ಸಂರಕ್ಷಿಸಬೇಕು ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಜನತೆಗೆ ಕರೆ ನೀಡಿದ್ದಾರೆ.
15 ವರ್ಷಗಳ ಬಳಿಕ, ಅಲ್ಲದೇ ತಾವು ರಾಷ್ಟ್ರಪತಿಯಾದ ನಂತರ ಇದೇ ಮೊದಲ ಬಾರಿಗೆ ಶುಕ್ರವಾರ ದೆಹಲಿಯಿಂದ ವಿಶೇಷ ರೈಲಿನಲ್ಲಿ ಉತ್ತರ ಪ್ರದೇಶದ ಕಾನ್ಪುರದ ತಮ್ಮ ಪರಾಂಖ್ ಸ್ವಗ್ರಾಮಕ್ಕೆ ಪ್ರಯಾಣ ಕೋವಿಂದ್ ಬೆಳೆಸಿದ್ದರು. ಕಾನ್ಪುರದ ಜಿಂಜಾಕ್ ಎಂಬಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿಯಾಗಿದ್ದರೂ ಪ್ರತಿ ತಿಂಗಳು 2.75 ಲಕ್ಷ ರೂ.ಗಳನ್ನು ತೆರಿಗೆಯಾಗಿ ಪಾವತಿಸುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ: 15 ವರ್ಷಗಳ ಬಳಿಕ ಟ್ರೈನ್ ಹತ್ತಿದ ರಾಷ್ಟ್ರಪತಿ... ಕಲಾಂ ಬಳಿಕ ಕೋವಿಂದ್ ರೈಲು ಪ್ರಯಾಣ!
"ನನ್ನ ಸಂಬಳದ ಬಹುಪಾಲು ಭಾಗವು ತೆರಿಗೆಗೆ ಹೋಗುತ್ತದೆ, ಆದರೆ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ. ಎಲ್ಲರೂ ನನಗೆ ತಿಂಗಳಿಗೆ 5 ಲಕ್ಷ ರೂ. ಸಿಗುತ್ತದೆ ಎಂದು ಹೇಳುತ್ತಾರೆ. ತೆರಿಗೆ ಪಾವತಿಸಿದ ನಂತರ ನನ್ನ ಬಳಿ ಉಳಿದಿರುವ ಮೊತ್ತಕ್ಕಿಂತ ಹೆಚ್ಚಿನ ಸಂಬಳವನ್ನು ಅಧಿಕಾರಿಗಳು ಮತ್ತು ಶಿಕ್ಷಕರು ಪಡೆಯುತ್ತಾರೆ. ನಾವು ತೆರಿಗೆಯಾಗಿ ಪಾವತಿಸುವ ಹಣದಿಂದ ಅಭಿವೃದ್ಧಿ ಕಾರ್ಯ ನಡೆಯುತ್ತದೆ. ಆದ್ದರಿಂದ ನಾವು ನಮ್ಮ ದೇಶದ ಸಂಪನ್ಮೂಲಗಳನ್ನು ನೋಡಿಕೊಳ್ಳಬೇಕು ಮತ್ತು ಅವುಗಳನ್ನು ನಾಶಪಡಿಸಬಾರದು. ಕೆಲವೊಮ್ಮೆ ರೈಲುಗಳು-ಬಸ್ಸುಗಳನ್ನು ಸುಟ್ಟು, ಆಸ್ತಿಪಾಸ್ತಿಗಳನ್ನು ನಾಶಮಾಡುವಲ್ಲಿ ಜನರು ಉತ್ಸುಕರಾಗಿರುತ್ತಾರೆ. ಇದು ಖಂಡಿತ ಒಳ್ಳೆಯ ಬೆಳವಣಿಗೆ ಪ್ರವೃತ್ತಿಯಲ್ಲ " ಎಂದು ಕೋವಿಂದ್ ಹೇಳಿದರು.
ನಾನು ಸಾಂವಿಧಾನಿಕ ಹುದ್ದೆಯಲ್ಲಿರುವುದರಿಂದ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ಅದು ಕಾಂಗ್ರೆಸ್, ಬಿಜೆಪಿ, ಜೆಡಿಯು, ಎಸ್ಪಿ ಅಥವಾ ಬಿಎಸ್ಪಿ ಆಗಿರಲಿ ಎಲ್ಲಾ ಪಕ್ಷಗಳು ನನಗೆ ಸಮಾನ. ಹೀಗಾಗಿ ನನ್ನ ಮುಂದೆ ರಾಜಕೀಯ ವಿಚಾರ ಮಾತನಾಡಬೇಡಿ ಎಂದು ಇದೇ ವೇಳೆ ಹೇಳಿದರು.