ಹೈದರಾಬಾದ್: ತನ್ನ ಮಗುವಿನ ಆಗಮನಕ್ಕಾಗಿ ಆ ತಾಯಿ ನೂರೊಂದು ಕನಸುಗಳನ್ನು ಹೊತ್ತಿದ್ದಳು. ಅದರಂತೆ ಮಗುವಿಗಾಗಿ ಪಾದರಕ್ಷೆಗಳನ್ನು ಸಹ ಖರೀದಿಸಿದ್ದಳು. ಆದ್ರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಗರ್ಭಿಣಿ ಇಹಲೋಕ ತ್ಯಜಿಸಿದ್ದಾಳೆ. ಈ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.
ತವರಿಗೆ ಬಂದ ಮಗಳು..
ಕಳೆದ ವರ್ಷ ಮಲ್ಲಾಪೂರ ನಿವಾಸಿ ಪಾವನಿಗೆ (22) ಆಂಧ್ರಪ್ರದೇಶದ ಎಲೂರು ನಿವಾಸಿ ತಿರುಮಲರಾವ್ ಜೊತೆ ಮದುವೆಯಾಗಿತ್ತು. ಗಂಡ ವ್ಯವಸಾಯ ಮಾಡುತ್ತಾರೆ. ತುಂಬು ಗರ್ಭಿಣಿಯಾಗಿದ್ದ ಪಾವನಿ ಹೆರಿಗಾಗಿ ತವರುಮನೆಗೆ ಬಂದಿದ್ದರು.
ಪಾವನಿ 8 ತಿಂಗಳು ತುಂಬು ಗರ್ಭಿಣಿಯಾಗಿದ್ದು, ಆಕೆಯ ತಂದೆ ಜೋಗರಾವ್ ಮತ್ತು ತಾಯಿ ನೀಲವೇಣಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಿದ್ದಾರೆ. ಕೆಲ ದಿನಗಳ ಬಳಿಕ ಪಾವನಿ ತನ್ನ ಸಹೋದರಿಯೊಂದಿಗೆ ಮತ್ತೆ ಆ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಗ ಹೊಟ್ಟೆಯಲ್ಲಿ ಆಮ್ನಿಯೋಟಿಕ್ ದ್ರವ ಕಡಿಮೆಯಿದೆ ಎಂದು ಸಲಾಯಿನ್ ಏರಿಸಿ ಕಳುಹಿಸಿದ್ದಾರೆ.
ಚಿಕಿತ್ಸೆಗಾಗಿ ಪರದಾಟ..
ಶುಕ್ರವಾರ ಬೆಳ್ಳಂಬೆಳಗ್ಗೆ ಪಾವನಿಗೆ ಆಯಸ್ಸು ಹೆಚ್ಚಾಗಿತ್ತು. ಮತ್ತೆ ಅದೇ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದಾರೆ. ಕೋವಿಡ್ ಇರಬಹುದೆಂದು ಅನುಮಾನಿಸಿದ ವೈದ್ಯರು ಚಿಕಿತ್ಸೆ ನೀಡಲ್ಲವೆಂದು ಹೇಳಿದ್ದಾರೆ. ನಾವು ನಮ್ಮ ಮಗಳನ್ನು ಇಲ್ಲೇ ಚಿಕಿತ್ಸೆಗಾಗಿ ತೋರಿಸಿದ್ದೇವೆ. ದಯವಿಟ್ಟು ಚಿಕಿತ್ಸೆ ನೀಡಿ ಅಂತ ಪಾವನಿ ತಾಯಿ ನೀಲವೇಣಿ ಎಷ್ಟೇ ಬೇಡಿಕೊಂಡರು ವೈದ್ಯರು ಮಾತ್ರ ಚಿಕಿತ್ಸೆ ನೀಡದೇ ಕಳುಹಿಸಿದ್ದಾರೆ.
ನೀಲವೇಣಿಗೆ ದಿಕ್ಕುದೋಚದೇ ಆ್ಯಂಬುಲೆನ್ಸ್ನಲ್ಲಿ ಮಗಳನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಯೂ ಸಹ ಅದೇ ಪರಿಸ್ಥಿತಿ. ಬಳಿಕ ಲಕ್ಡಿಕಾಪೂಲ್ನ ಆಸ್ಪತ್ರೆಗೆ ಕರೆದೊಯ್ದಾಗ ನಮ್ಮಲ್ಲಿ ವೆಂಟಿಲೇಟರ್ ಇಲ್ಲವೆಂದು ಹೇಳಿ ಎಲ್ಬಿ ನಗರದ ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡಿದರು. ಅವರು ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡಿದರು. ಅಲ್ಲಿ ಪಾವನಿಯನ್ನು ದಾಖಲಿಸಿಕೊಂಡ ವೈದ್ಯರು ಆಕೆ ಬದುಕುವುದು ಕಷ್ಟ, ಗಾಂಧಿ ಅಥವಾ ಕೋಟಿ ಪ್ರಸೂತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಮಗು ಆದ್ರೂ ಬದಕುಳಿಯಬಹುದೆಂದು ಹೇಳಿ ಕಳುಹಿಸಿದ್ದಾರೆ.
ತಾಯಿ-ಮಗು ಇಬ್ಬರು ಸಾವು..
ಕೋಟಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆದಲ್ಲಿ ಪಾವನಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಬೆಳಗ್ಗೆ 11.30ಕ್ಕೆ ಕೋಟಿ ಆಸ್ಪತ್ರೆಗೆ ತಲುಪಿದಾಗ ಆ್ಯಂಬುಲೆನ್ಸ್ನಲ್ಲಿ ವೈದ್ಯರು ಪರೀಕ್ಷಿಸಿದಾಗ ತಾಯಿ-ಮಗು ಇಬ್ಬರು ಮೃತಪಟ್ಟಿದ್ದಾರೆಂದು ಘೋಷಿಸಿದರು. ಬೆಳಗ್ಗೆಯಿಂದ ಇಬ್ಬರನ್ನು ಬದುಕಿಸುವ ಸಲುವಾಗಿ ಪಾವನಿ ತಾಯಿ ನೀಲವೇಣಿ ಪಟ್ಟ ಕಷ್ಟ ಪ್ರಯೋಜನವಾಗಲಿಲ್ಲ. ಕೊನೆಗೆ ಆ್ಯಂಬುಲೆನ್ಸ್ ಬಿಲ್ ಸಹ 30 ಸಾವಿರ ರೂ. ಆಯ್ತು.
ದಿಕ್ಕು ತೋಚದಂತಾದ ಕುಟುಂಬ..
ಅಂತ್ಯಕ್ರಿಯೆಗಾಗಿ ಕುಟುಂಬಸ್ಥರು ಆಕೆಯ ಮೃತದೇಹವನ್ನು ಮಲ್ಲಾಪುರ ಶವಾಗಾರ ಕೇಂದ್ರಕ್ಕೆ ತೆಗೆದುಕೊಂಡು ಹೋದಾಗ ಅಲ್ಲಿ ತಾಯಿ-ಮಗುವನ್ನು ಬೇರೆ ಮಾಡದೇ ದಹನಮಾಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ ಐದು ಆಸ್ಪತ್ರೆಗೆ ಅಲೆದ್ರೂ ಸಹ ಅವರಿಗೆ ನಿರಾಸೆಯಾಗಿದೆ. ಅವರೆಲ್ಲರೂ ಶಸ್ತ್ರಚಿಕಿತ್ಸೆ ಮಾಡಲಾಗಲ್ಲವೆಂದು ಕೈಯೆತ್ತಿದ್ದರು. ದಿಕ್ಕು ದೋಚದ ಸ್ಥಿತಿಯಲ್ಲಿ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋದರು. ಮಗಳನ್ನು ಕಳೆದುಕೊಂಡ ಕುಟುಂಬಕ್ಕೆ ಮತ್ತಷ್ಟು ಕಷ್ಟಗಳು ಎದುರಾಗುತ್ತಿದ್ದು, ಮುಂದೆ ಏನು ಅನ್ನೋದನ್ನು ಅರಿಯದ ಸ್ಥಿತಿಯಲ್ಲಿದ್ದಾರೆ.