ಚೆನ್ನೈ: ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ಗೆ ಸೋಲಿನ ರುಚಿ ತೋರಿಸಿರುವ 16 ವರ್ಷದ ಆರ್. ಪ್ರಗ್ನಾನಂದ ಅವರು ವಿಶ್ವದ ಗಮನ ಸೆಳೆದಿದ್ದಾರೆ. ಹಿಂದೆ ತಮ್ಮ ಅಕ್ಕನ ಜೊತೆ ಹವ್ಯಾಸವಾಗಿ ಚೆಸ್ನನ್ನು ಆಡುತ್ತಿದ್ದುದು ಇಂದು ಅವರ ಬದುಕನ್ನೇ ಬದಲಿಸಿದೆ.
ಪ್ರಗ್ನಾನಂದ ಅವರ ಅಕ್ಕ ಹೆಚ್ಚಾಗಿ ಟಿವಿಯಲ್ಲಿ ಹಲವಾರು ಕಾರ್ಟೂನ್ ಶೋಗಳನ್ನು ನೋಡುತ್ತಿದ್ದರು. ಇದನ್ನು ತಪ್ಪಿಸಲು ಅವರು ಅಕ್ಕ ವೈಶಾಲಿ ಜೊತೆ ಚೆಸ್ ಆಡಲು ಶುರು ಮಾಡಿದರು. ಹೀಗೆ ಆಟವನ್ನು ಆಡುತ್ತಾ ಅವರು ಇಂದು ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಸ್ನೇಹಿತರು ಮತ್ತು ತರಬೇತುದಾರರು ಅವರನ್ನು ಪ್ರೀತಿಯಿಂದ ಪ್ರಗ್ಗು ಎಂದು ಕರೆಯುತ್ತಾರೆ. ವಿಶ್ವನಾಥನ್ ಆನಂದ್ ಮತ್ತು ಪಿ. ಹರಿಕೃಷ್ಣ ನಂತರ ವಿಶ್ವ ಚಾಂಪಿಯನ್ ಆಗಿರುವ ಮೂರನೇ ಭಾರತೀಯ ಇವರಾಗಿದ್ದಾರೆ.
ಪೋಲಿಯೋ ಪೀಡಿತ ಬ್ಯಾಂಕ್ ಉದ್ಯೋಗಿ ತಂದೆ ರಮೇಶಬಾಬು ಮತ್ತು ತಾಯಿ ನಾಗಲಕ್ಷ್ಮಿ ಅವರು, ವೈಶಾಲಿ ಟಿವಿ ಮುಂದೆ ಹೆಚ್ಚು ಸಮಯ ಕಳೆಯುತ್ತಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಹಾಗಾಗಿ ಪ್ರಗ್ನಾನಂದ ಅವರು ಅಕ್ಕನ ಜೊತೆ ಚೆಸ್ ಆಡಲು ಪ್ರಾರಂಭಿಸಿದರು.
ಅಕ್ಕನ ಜೊತೆ ಚೆಸ್ ಆಡುತ್ತಾ ಪ್ರಗ್ನಾನಂದ ಅವರಿಗೆ ಇದರ ಮೇಲಿನ ಆಸಕ್ತಿ ಹೆಚ್ಚಾಯಿತು. ಇದೀಗ ಅವರು ಭಾರತದ ಮೂರನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಏರ್ಥಿಂಗ್ಸ್ ಮಾಸ್ಟರ್ಸ್ ಚೆಸ್ : ವಿಶ್ವ ನಂ.1 ಮ್ಯಾಗ್ನಸ್ ಕಾರ್ಲಸನ್ರನ್ನು ಮಣಿಸಿದ ಭಾರತದ 16ರ ಪೋರ ಪ್ರಗ್ನಾನಂದ್
ಬಾಲ್ಯದಲ್ಲಿ ಟಿವಿ ನೋಡುವ ಹವ್ಯಾಸಕ್ಕೆ ಕಡಿವಾಣ ಹಾಕಲು ವೈಶಾಲಿಗೆ ಚೆಸ್ ಪರಿಚಯಿಸಿದ್ದೆವು. ಹೀಗೆ ಆಡುತ್ತಾ ಇಬ್ಬರು ಮಕ್ಕಳು ಆಟವನ್ನು ಇಷ್ಟಪಟ್ಟರು ಮತ್ತು ಅದನ್ನು ಮುಂದುವರಿಸಲು ನಿರ್ಧರಿಸಿದರು. ಇದೀಗ ನಮ್ಮ ಮಗ ಚೆಸ್ನಲ್ಲಿ ಸಾಧನೆ ಮಾಡಿರುವುದು ನನಗೆ ಸಂತಸ ತಂದಿದೆ. ನಾಗಲಕ್ಷ್ಮಿ ಅವರಿಬ್ಬರನ್ನು ಟೂರ್ನಮೆಂಟ್‌ಗಳಿಗೆ ಕರೆದುಕೊಂಡು ಹೋಗುತ್ತಾರೆ. ಈ ಕ್ರೆಡಿಟ್ ನನ್ನ ಹೆಂಡತಿಗೆ ಸಲ್ಲುತ್ತದೆ. ಅವರು ಪಂದ್ಯಾವಳಿಗಳಿಗೆ ಆಕೆಯೊಂದಿಗೆ ಹೋಗುತ್ತಾರೆ ಮತ್ತು ಆಕೆ ಅವರಿಗೆ ತುಂಬಾ ಬೆಂಬಲ ನೀಡುತ್ತಾಳೆ ಎಂದು ತಂದೆ ರಮೇಶ್‌ಬಾಬು ಹೇಳುತ್ತಾರೆ.
ಮಹಿಳಾ GM ಆಗಿರುವ 19 ವರ್ಷದ ವೈಶಾಲಿ ಅವರು ಪಂದ್ಯಾವಳಿಯನ್ನು ಗೆದ್ದ ನಂತರ ಚೆಸ್‌ನಲ್ಲಿನ ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಂಡರು. ಬಳಿಕ ಆಕೆಯ ಚಿಕ್ಕ ಸಹೋದರ ಕೂಡ ಕ್ರೀಡೆಯತ್ತ ಒಲವು ತೋರಿದ.
ನಾನು ಆರು ವರ್ಷದವಳಿದ್ದಾಗ ಬಹಳಷ್ಟು ಕಾರ್ಟೂನ್‌ಗಳನ್ನು ನೋಡುತ್ತಿದ್ದೆ. ನನ್ನ ಪೋಷಕರು ನನ್ನನ್ನು ಟಿವಿಯಿಂದ ದೂರವಿಡಲು ಚೆಸ್ ಮತ್ತು ಡ್ರಾಯಿಂಗ್ ತರಗತಿಗಳಿಗೆ ಸೇರಿಸಿದರು ಎಂದು ವೈಶಾಲಿ ಹೇಳುತ್ತಾರೆ.
ಪ್ರಗ್ನಾನಂದ ಅವರು 2018 ರಲ್ಲಿ, ಅಸ್ಕರ್ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿಯನ್ನು ಗಳಿಸಿದರು. ಈ ಸಾಧನೆಯನ್ನು ಮಾಡಿದ ದೇಶದ ಅತ್ಯಂತ ಕಿರಿಯ ಮತ್ತು ಆ ಸಮಯದಲ್ಲಿ ವಿಶ್ವದ ಎರಡನೇ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ಒಂದು ಹವ್ಯಾಸ ಅವರನ್ನು ಇಂದು ಕ್ರೀಡಾಲೋಕದಲ್ಲಿ ಉತ್ತುಂಗಕ್ಕೆ ಏರಿಸಿದೆ.