ದೇಶಾದ್ಯಂತ ಕೊರೊನಾ ಪ್ರಕರಣಗಳು ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಬುಧವಾರ, ಭಾರತದಲ್ಲಿ 2,95,041 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಸಂಖ್ಯೆ ಇದುವರೆಗೆ ದಾಖಲಾದ ಅತೀ ಹೆಚ್ಚಿನ ಸಂಖ್ಯೆಯಾಗಿದೆ. 21,57,538 ಸಕ್ರಿಯ ಪ್ರಕರಣಗಳೊಂದಿಗೆ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,56,16,130 ಕ್ಕೆ ಏರಿದೆ. ರಾಷ್ಟ್ರಾದ್ಯಂತ ಸೋಂಕುಗಳು ಮತ್ತು ಸಾವುಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಈಟಿವಿ ಭಾರತವು ವೈರಾಲಜಿಸ್ಟ್ ಗಗನ್‌ದೀಪ್ ಕಾಂಗ್ ಅವರೊಂದಿಗೆ ಈ ಕುರಿತು ಸಂವಾದ ನಡೆಸಿದೆ.
ಈಟಿವಿ ಭಾರತ: ಕೊರೊನಾ ಮೊದಲ ಅಲೆಗೆ ಹೋಲಿಸಿದರೆ 2ನೇ ಅಲೆಯ ವೇಗ ಹೆಚ್ಚಾಗಿದೆ. ಭಾರತದಲ್ಲಿ ಈ ಅಲೆಯ ವೇಗ ಹೇಗಿದೆ?ಎರಡನೇ ಅಲೆಯು ಎಷ್ಟು ಗಂಭೀರವಾಗಿದೆ? ಕೋವಿಡ್ ಅಲೆಯ ಮರುಕಳಿಸುವಿಕೆಗೆ ಕಾರಣ ಏನು ಎಂದು ನೀವು ಹೇಳುತ್ತೀರಿ? ಕೋವಿಡ್ ಪ್ರಕರಣಗಳು ದೇಶದಲ್ಲಿ ದಿನಕ್ಕೆ 4 ಲಕ್ಷ ದಾಟಬಹುದು ಎಂದು ಹಲವರು ಹೇಳುತ್ತಿದ್ದಾರೆ , ನಿಮ್ಮ ಅಭಿಪ್ರಾಯವೇನು?
ಗಗನ್‌ದೀಪ್ ಕಾಂಗ್: ದೇಶಾದ್ಯಂತ ಕೊರೊನಾ 2ನೇ ಅಲೆಯು ಮೊದಲ ಅಲೆಗಿಂತ ಅತೀ ವೇಗವಾಗಿದೆ. ಏಕೆಂದರೆ, ಮೊದಲ ಅಲೆಗಿಂತ ಭಿನ್ನವಾಗಿ, ನಾವು ಕೋವಿಡ್ ನಿಯಮಗಳನ್ನು ಸೂಕ್ತವಾದ ಅನುಸರಿಸುತ್ತಿರಲಿಲ್ಲ ಮತ್ತು ವೈರಸ್‌ನ ರೂಪಾಂತರಗಳು ನಾವು ಈ ಹಿಂದೆ ನೋಡಿದ್ದಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿರಬಹುದು. ಇದರರ್ಥ ಎಲ್ಲರೂ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಹಾಗೂ ಆದಷ್ಟೂ ಮನೆಯಲ್ಲಿಯೇ ಇರಬೇಕು ಎಂಬುದು.
ಕೋವಿಡ್ ಎರಡನೆಯ ಅಲೆ ತುಂಬಾ ಗಂಭೀರವಾಗಿದೆ, ಇದು ಆರೋಗ್ಯ ವ್ಯವಸ್ಥೆಯನ್ನು ಮುಳುಗಿಸಬಹುದು. ನಾವು ಏನನ್ನೂ ಮಾಡದೇ ಕೈಕಟ್ಟಿ ಕುಳಿತರೆ ಪ್ರಕರಣಗಳು ಏರುತ್ತಲೇ ಹೋಗುವ ಸಾಧ್ಯತೆ ಹೆಚ್ಚಿದೆ ಆದರೆ ಅದೃಷ್ಟವಶಾತ್, ರಾಜ್ಯಗಳು ವೈರಸ್ ನಿಯಂತ್ರಿಸಲು ಈಗ ನಿರ್ಬಂಧಗಳನ್ನು ವಿಧಿಸಲು ಪ್ರಾರಂಭಿಸಿವೆ, ಆದಾಗ್ಯೂ ಅಂದಾಜು 4 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಪ್ರಕರಣಗಳು ಬರಲು ಸಾಧ್ಯವಿದೆ ಎಂದು ನಾನು ಭಾವಿಸುತ್ತೇನೆ.
ಈಟಿವಿ ಭಾರತ:ನಮ್ಮ ಲಸಿಕೆ ಉತ್ಪಾದನಾ ಸಾಮರ್ಥ್ಯಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಆದರೆ, ಅಂತಿಮವಾಗಿ ಭಾರಿ ಕೊರತೆ ಎದುರಿಸುತ್ತಿದ್ದೇವೆ. ಈ ಪರಿಸ್ಥಿತಿಗೆ ಏನು ಕಾರಣ?
ಗಗನ್‌ದೀಪ್ ಕಾಂಗ್:ಮೂರು ಮುಖ್ಯ ಕಾರಣಗಳಿವೆ. ಮೊದಲನೆಯದಾಗಿ, ಲಸಿಕೆಗಳಿಗೆ ಭಾರತದ ಉತ್ಪಾದನಾ ಸಾಮರ್ಥ್ಯ ದೊಡ್ಡದಾಗಿದ್ದರೂ, ಲಸಿಕೆಗಳನ್ನು ತಯಾರಿಸಲು ಬೇಕಾದ ವಸ್ತುಗಳು ಭಾರತದಲ್ಲಿ ಲಭ್ಯವಿಲ್ಲ. ನಾವು ಜಾಗತಿಕ ಪೂರೈಕೆ ಸರಪಳಿಯಲ್ಲಿ ಸ್ಪರ್ಧಿಸಬೇಕಾಗಿದೆ ಮತ್ತು ವಿಶ್ವದ ಪ್ರತಿ ಲಸಿಕೆ ತಯಾರಕರು ಲಭ್ಯವಿರುವದನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ.
ಎರಡನೆಯದಾಗಿ, ನಮ್ಮ ಲಸಿಕೆ ತಯಾರಕರು ತಮ್ಮ ಉತ್ಪಾದನೆಯನ್ನು ಎಷ್ಟು ಬೇಗನೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬ ಅಂದಾಜುಗಳನ್ನು ಹೊಂದಿದ್ದಾರೆ ಆದರೆ ವಿವಿಧ ಕಾರಣಗಳಿಗಾಗಿ, ಅಂದಾಜಿಗೆ ತಕ್ಕಂತೆ ಉತ್ಪಾದನೆ ಸಾಧ್ಯವಾಗಿಲ್ಲ ಇದು ಕೊರತೆಗೆ ಕಾರಣವಾಗಿದೆ.
ಮೂರನೆಯದಾಗಿ, ಲಸಿಕೆ ತಯಾರಕರು ಆಶ್ವಾಸಿತ ಮಾರುಕಟ್ಟೆಯನ್ನು ಹೊಂದಿದ್ದಾರೆ. ಅವರು ದೇಶದೊಳಗೆ ಹೇಗೆ ಒದಗಿಸಬೇಕೆಂಬುದನ್ನು ತಿಳಿದುಕೊಳ್ಳುವುದು ಮತ್ತು ಅವರು ರಫ್ತು ಮಾಡುವುದರ ಬಗ್ಗೆ ತಿಳಿದುಕೊಳ್ಳುವುದು ಅವರ ಯೋಜನೆಗೆ ಅವಶ್ಯಕವಾಗಿದೆ ( ಕಂಪನಿಗಳು ಕಾರ್ಯನಿರ್ವಹಿಸಲು ಸಾಕಷ್ಟು ಹಣದ ಹರಿವನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು). ಯಾವುದೇ ನಿರ್ವಹಿಸುವಿಕೆ ಇಲ್ಲದಿದ್ದರೆ, ಮತ್ತು ಕಡಿಮೆ ಸಮಯದ ದರದಲ್ಲಿ ಲಸಿಕೆ ಸ್ವಲ್ಪ ಸ್ವಲ್ಪವೇ ಸರ್ಕಾರ ಆದೇಶಿಸಿದರೆ, ಲಸಿಕೆ ಉದ್ಯಮವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ತುಂಬಾ ಕಷ್ಟಕರವಾಗುತ್ತದೆ.
ಈಟಿವಿ ಭಾರತ: ವೈರಾಲಜಿಯಲ್ಲಿ ಈ ಒಂದು ವರ್ಷದ ತೀವ್ರ ಸಂಶೋಧನೆಯ ನಂತರ, ವೈರಸ್‌ನ ಭವಿಷ್ಯದ ಕಾರ್ಯಚಟುವಟಿಕೆಯನ್ನ ನಿಯಂತ್ರಿಸುವ ಸ್ಥಿತಿಯಲ್ಲಿ ನಾವು ಇದ್ದೇವೆಯೇ? ಅಥವಾ ಅದು ಬಲಗೊಳ್ಳುವ ಸ್ಥಿತಿಯಲ್ಲಿದೆಯೇ
ಗಗನ್‌ದೀಪ್ ಕಾಂಗ್:ಕಳೆದ ವರ್ಷ ಈ ವೈರಸ್‌ನ ನಡವಳಿಕೆಯ ಬಗ್ಗೆ ನಾವು ಸಾಕಷ್ಟು ಕಲಿತಿದ್ದೇವೆ ಮತ್ತು ಮುಂದೆ ಏನಾಗಬಹುದು ಎಂಬುದನ್ನು ಊಹಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಎಲ್ಲ ವೈರಸ್‌ಗಳಂತೆ, ಈ ವೈರಸ್ ಹೆಚ್ಚು ಸುಲಭವಾಗಿ ಹರಡುತ್ತದೆ. ಹಾಗಾಗಿ ಅದು ಏರುತ್ತಲೇ ಇರುತ್ತದೆ. ಇದರರ್ಥ ಅದು ಹೆಚ್ಚು ಸಾಂಕ್ರಾಮಿಕವಾಗಲು ಪ್ರಯತ್ನಿಸುತ್ತದೆ ಮತ್ತು ಲಸಿಕೆಗಳನ್ನು ವ್ಯಾಪಕವಾಗಿ ಬಳಸಿದರೆ, ಅದು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಅದೃಷ್ಟವಶಾತ್, ವೈರಸ್‌ನ ಸ್ಪೈಕ್ ಪ್ರೋಟೀನ್ ಸೋಂಕಿಗೆ ಅತ್ಯಗತ್ಯ ಮತ್ತು ಸ್ಪೈಕ್ ಪ್ರೋಟೀನ್ ಎಷ್ಟು ಬದಲಾಗಬಹುದು ಎಂಬುದಕ್ಕೆ ಒಂದು ಮಿತಿ ಇರುವುದರಿಂದ, ವೈರಸ್‌ನಲ್ಲಿ ನಾವು ಕಾಣುವ ಎಲ್ಲ ವ್ಯತ್ಯಾಸಗಳು ಮುಂದಿನ ಎರಡರಲ್ಲಿ ಕಂಡುಬರುವ ಸಾಧ್ಯತೆಯಿದೆ.
ಈಟಿವಿ ಭಾರತ:ಈ 2 ನೇ ಅಲೆ ವೇಳೆ ದೇಶಾದ್ಯಂತ ಲಾಕ್‌ಡೌನ್ ಹೇರಿದ ಪರಿಣಾಮಗಳನ್ನು ನೀವು ಹೇಗೆ ನಿರ್ಣಯಿಸುತ್ತೀರಿ? ವೈಜ್ಞಾನಿಕ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಆರ್ಥಿಕ ಮತ್ತು ರಾಜಕೀಯ ಕಾರಣಗಳನ್ನು ಅನುಮತಿಸಬಹುದೇ? ವೈರಸ್ ನಿಯಂತ್ರಿಸಲು ಇರುವ ಸಮಸ್ಯೆಗಳನ್ನು ಸರ್ಕಾರಗಳು ಸರಿಯಾಗಿ ಪರಿಹರಿಸುತ್ತವೆ ಎಂದು ನೀವು ಭಾವಿಸುತ್ತೀರಾ?
ಗಗನ್‌ದೀಪ್ ಕಾಂಗ್: ನಾವು ಲಾಕ್‌ಡೌನ್ ಅನ್ನು ಮೀರಿ ಮತ್ತೇನೋ ಪರಿಹಾರ ಕ್ರಮವನ್ನು ಅನುಸರಿಸಬೇಕು ಎಂದು ನಾನು ಭಾವಿಸುತ್ತೇನೆ.ರಾಜ್ಯದಲ್ಲಿ ಸೋಂಕು ಹರಡುವಿಕೆಗೆ ಕಾರಣವಾಗುವ ಚಟುವಟಿಕೆಗಳು ಯಾವುವು? ನಾವು ಅವುಗಳನ್ನು ವರ್ಗೀಕರಿಸಬಹುದೇ? ಇದು ಮಾರುಕಟ್ಟೆಗಳು ಅಥವಾ ಕಾಲೇಜುಗಳು ಅಥವಾ ಸಿನೆಮಾ ಚಿತ್ರಮಂದಿರಗಳ ಶಾಲೆ ಅಥವಾ ಚುನಾವಣಾ ರ್ಯಾಲಿಗಳೇ, ಉತ್ಸವಗಳೇ? ಯಾವುದು ಹರಡುವಿಕೆಗೆ ಪ್ರಮುಖ ಕಾರಣವಾಗಬಹುದು? ಯಾವುದನ್ನು ನಾವು ಟಾರ್ಗೆಟ್ ಮಾಡಬೇಕು ಎಂಬುದನ್ನು ಸರ್ಕಾರಗಳು ಸಾಕ್ಷ್ಯಗಳ ಮೂಲಕ ತಿಳಿಸಬೇಕಾಗಿದೆ. ಲಾಕ್‌ಡೌನ್ ಒಂದು ಮೊಂಡಾದ ಅಸ್ತ್ರವಾಗಿದ್ದು, ಸಮಾಜ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಪಡಿಸದೇ ನಾವು ಉತ್ತಮವಾಗಿ ಮಾಡಬಹುದು.
ಈಟಿವಿ ಭಾರತ:ಭಾರತದಲ್ಲಿನ ವೈರಸ್ ರೂಪಾಂತರಗಳ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಬಹುದೇ? ಹೊಸ ರೂಪಾಂತರಗಳ ತೀವ್ರತೆ ಹೇಗಿದೆ?
ಗಗನ್‌ದೀಪ್ ಕಾಂಗ್: ಭಾರತದಲ್ಲಿ ವೈರಸ್ ರೂಪಾಂತರಗಳನ್ನು ಸಾಕಷ್ಟು ಅಧ್ಯಯನ ಮಾಡಲಾಗಿಲ್ಲ ಆದರೆ ಹೆಚ್ಚಿನ ಸೋಂಕು ಉಂಟುಮಾಡುವ ಸಾಮರ್ಥ್ಯವಿದೆ ಎಂದು ತೋರುತ್ತದೆ. ಇವುಗಳು ಹೆಚ್ಚು ಗಂಭೀರವಾದ ಸೋಂಕುಗಳಾಗಿದೆಯೇ ಎಂದು ನೋಡಬೇಕಾಗಿದೆ.ವೈರಸ್‌ನ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯೋಗಾಲಯ ಸೋಂಕುಶಾಸ್ತ್ರ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕೆಂಬುದು ಎಂಬುದು ಸ್ಪಷ್ಟವಾಗಿದೆ.
ಈಟಿವಿ ಭಾರತ: ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳು ಏನು ಮಾಡಬೇಕು? ಈಗ ಜನರು ಮತ್ತು ಅವರ ನಾಯಕರ ಜವಾಬ್ದಾರಿಗಳೇನು? ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ನಿರ್ಣಾಯಕ ಕ್ರಮಗಳು ಮತ್ತು ಕಾರ್ಯತಂತ್ರಗಳು ಯಾವುವು?
ಗಗನ್‌ದೀಪ್ ಕಾಂಗ್: ಸಾರ್ವಜನಿಕ ಆರೋಗ್ಯದ ಬಗ್ಗೆ ರಾಜಿ ಮಾಡಿಕೊಳ್ಳದೇ ಅಗತ್ಯ ಕಾರ್ಯಗಳ ನಿರ್ವಹಣೆ ಮತ್ತು ಅಗತ್ಯ ಆರ್ಥಿಕ ಚಟುವಟಿಕೆಗಳ ಬಗ್ಗೆ ರಾಜ್ಯ ಸರ್ಕಾರಗಳು ಯೋಚಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ನಾವು ನೋಡಿದಂತೆ ಮನರಂಜನೆ, ರಾಜಕೀಯ ರ್ಯಾಲಿಗಳು ಮತ್ತು ಧಾರ್ಮಿಕ ಕಾರ್ಯಗಳಂತಹ ಕೆಲವು ಚಟುವಟಿಕೆಗಳು ಜನಸಂದಣಿಯನ್ನು ಬೆಂಬಲಿಸುತ್ತಿವೆ. ವೈರಸ್ ಹರಡುವಿಕೆಗೆ ಜನಸಂದಣಿಗೆ ಮುಖ್ಯ ಕಾರಣ. ಈ ಬಗ್ಗೆ ರಾಜ್ಯ ಸರ್ಕಾರಗಳು ಚಿತ್ತ ಹರಿಸಬೇಕಾಗಿದೆ.
ಈಟಿವಿ ಭಾರತ: ನಮ್ಮ ವ್ಯಾಕ್ಸಿನೇಷನ್ ಇನ್ನೂ ಶೇಕಡಾ 10 ಕ್ಕಿಂತ ಕಡಿಮೆ ಇದೆ. ಲಸಿಕೆ ತೆಗೆದುಕೊಳ್ಳುವಿಕೆಯನ್ನು ಹೆಚ್ಚಿಸಲು ಏನು ಮಾಡಬಹುದು?
ಗಗನ್‌ದೀಪ್ ಕಾಂಗ್: ಈ ಕುರಿತು ನಾವು ಉತ್ತಮವಾದ ಸಂವಹನ ಮಾಡಬೇಕಾಗಿದೆ. ಜನಸಂಖ್ಯೆಯ ಗಮನಾರ್ಹ ಪ್ರಮಾಣದಲ್ಲಿ ಲಸಿಕೆ ಹಾಕಿದ ನಂತರ, ಪ್ರಸ್ತುತ ನಮ್ಮ ಮೇಲೆ ಇರಿಸಲಾಗಿರುವ ಅನೇಕ ನಿರ್ಬಂಧಗಳಿಂದ ನಮ್ಮನ್ನು ಬಿಡುಗಡೆ ಮಾಡಬಹುದು ಎಂದು ಅರ್ಥಮಾಡಿಕೊಳ್ಳಲು ನಾವು ಇಸ್ರೇಲ್ನ ಉದಾಹರಣೆಯನ್ನು ನೋಡಬೇಕಾಗಿದೆ.
ಈಟಿವಿ ಭಾರತ: ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಲಸಿಕೆ ಎಷ್ಟು ಪರಿಣಾಮಕಾರಿಯಾಗಿರುತ್ತದೆ?
ಗಗನ್‌ದೀಪ್ ಕಾಂಗ್: ಈ ಸಮಯದಲ್ಲಿ, ನಮ್ಮ ವ್ಯಾಕ್ಸಿನೇಷನ್ ತಂತ್ರವು ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವತ್ತ ಗಮನಹರಿಸಿಲ್ಲ ಆದರೆ ಹೆಚ್ಚಿನ ಅಪಾಯಯವಿರುವ ಜನರ ಸಾವುಗಳನ್ನು ನಿಯಂತ್ರಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ.ನಮ್ಮ ದೇಶದಲ್ಲಿ 30% ಕ್ಕಿಂತಲೂ ಹೆಚ್ಚು ಜನರಿಗೆ ರೋಗನಿರೋಧಕ ಶಕ್ತಿ ನೀಡಲು ಆರಂಭಿಸಿದರೆ ನಾವು ಸೋಂಕಿನ ಹರಡುವಿಕೆಯ ಪರಿಣಾಮವನ್ನು ಕಾಣಲು ಪ್ರಾರಂಭಿಸುತ್ತೇವೆ. ಇದು ಎಷ್ಟು ಸಮಯದವರೆಗೆ ರಕ್ಷಣೆ ನೀಡುತ್ತದೆ ಮತ್ತು ನಮ್ಮ ಜನರಿಗೆ ಎಷ್ಟು ಬೇಗನೆ ಲಸಿಕೆ ನೀಡಬಹುದು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಈಟಿವಿ ಭಾರತ: ಈ ಅಲೆ ಇನ್ನು ಎಷ್ಟು ಕಾಲ ಉಳಿಯಲಿದೆ?
ಗಗನ್‌ದೀಪ್ ಕಾಂಗ್: ಒಟ್ಟಾರೆಯಾಗಿ ಪ್ರಾರಂಭದಿಂದ ಅವನತಿಗೆ ಹೋಗುವ ಮಾರ್ಗಗಳು ಮೂರು ಮತ್ತು ನಾಲ್ಕು ತಿಂಗಳ ನಡುವೆ ಎಲ್ಲೋ ಇರುತ್ತವೆ. ನಾವು ಈಗಾಗಲೇ ಎರಡನೇ ತಿಂಗಳ ಅಂತ್ಯದಲ್ಲಿದ್ದೇವೆ, ಆದ್ದರಿಂದ ಗರಿಷ್ಠ ಮತ್ತು ಅವನತಿಗೆ ಹೋಗಲು ನಮಗೆ ಹೆಚ್ಚು ಸಮಯವಿಲ್ಲ, ನಾವು ವೈರಸ್ ಹರಡುವ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸಿದರೆ ಆದಷ್ಟು ಬೇಗ ಈ 2ನೇ ಅಲೆಯ ಕಾಲ ಕೊನೆಗೊಳ್ಳುತ್ತದೆ.