ಕಣ್ಣೂರು(ಕೇರಳ): ಎಎಸ್‌ಐ ಒಬ್ಬರು ರೈಲು ಪ್ರಯಾಣಿಕನನ್ನು ಕ್ರೂರವಾಗಿ ಒದೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಜನರೊಂದಿಗೆ ವರ್ತಿಸುತ್ತಿರುವ ರೀತಿಯನ್ನು ಸಾರ್ವಜನಿಕರು ಖಂಡಿಸಿದ್ದಾರೆ.
ರೈಲ್ವೇ ಪೊಲೀಸರೊಂದಿಗಿದ್ದ ಎಎಸ್‌ಐ ಪ್ರಮೋದ್, ಪ್ರಯಾಣಿಕನೊಬ್ಬನನ್ನು ಕೆಳಗೆ ಎಳೆದುಕೊಂಡು ಬಂದು ತಮ್ಮ ಬೂಟುಕಾಲಿಂದ ಪದೇ ಪದೇ ಒದೆಯುವುದು ದೃಶ್ಯದಲ್ಲಿದೆ. ಟಿಕೆಟ್‌ರಹಿತ ಪ್ರಯಾಣವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಕಣ್ಣೂರು ನಗರ ಪೊಲೀಸ್ ಕಮಿಷನರ್ ಆರ್.ಇಲಾಂಗೋ ಅವರು ವಿಶೇಷ ತಂಡವನ್ನು ನಿಯೋಜಿಸಿದ್ದಾರೆ. ರೈಲ್ವೇ ಪೊಲೀಸರು ಕೂಡಾ ತನಿಖೆ ಆರಂಭಿಸಿದ್ದಾರೆ.
ವಿವರ:
ಕಾಸರಗೋಡಿನಿಂದ ತಿರುವನಂತಪುರಕ್ಕೆ ಹೋಗುವ ಮಾವೇಲಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕಂಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಜರುಗಿದೆ. ಎಎಸ್‌ಐ ಪ್ರಮೋದ್ ಮತ್ತು ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಈ ರೀತಿ ವರ್ತನೆ ತೋರಿದ್ದಾರೆ. ಪ್ರಯಾಣಿಕನಿಗೆ ಟಿಕೆಟ್ ತೋರಿಸಲು ಕೇಳಿದ್ದಾರೆ. ಆತ ತನ್ನ ಬಳಿ ಸ್ಲೀಪರ್ ಟಿಕೆಟ್ ಇಲ್ಲ. ಆದರೆ, ಸಾಮಾನ್ಯ ಟಿಕೆಟ್ ಮಾತ್ರ ಇದೆ ಎಂದು ಹೇಳಿದ್ದಾನೆ. ಇದರಿಂದ ಕುಪಿತಗೊಂಡ ಪೊಲೀಸ್ ಆತನನ್ನು ಕಾಲಿನಿಂದ ಒದೆಯುತ್ತಾರೆ. ನಂತರ ವಡಕರ ನಿಲ್ದಾಣದಲ್ಲಿ ರೈಲು ಸ್ಟಾಪ್ ಆದಾಗ ಪ್ರಯಾಣಿಕರನ್ನು ಕಂಪಾರ್ಟ್‌ಮೆಂಟ್‌ನಿಂದ ಹೊರ ದಬ್ಬಲಾಗಿದೆ.
ಇದನ್ನೂ ಓದಿ: ಮುಂಬೈನ ಘಾಟ್‌ಕೋಪರ್ ಪ್ರದೇಶದ ಬಟ್ಟೆ ಅಂಗಡಿ ಗೋಡೌನ್‌ನಲ್ಲಿ ಬೆಂಕಿ; ಅಗ್ನಿಶಾಮಕ ವಾಹನಗಳು ದೌಡು
ಈ ಎಲ್ಲಾ ಘಟನೆಯನ್ನು ಪ್ರಯಾಣಿಕರೋರ್ವರು ವಿಡಿಯೋ ಮಾಡುತ್ತಿದ್ದಾರೆ ಎಂದು ಅರಿವಾದಾಗ ಎಎಸ್‌ಐ ಅವರಿಂದಲೂ ಟಿಕೆಟ್ ಕೇಳಿದ್ದಾರೆ. ಪೊಲೀಸರಿಗೆ ಟಿಕೆಟ್ ತೋರಿಸಲು ನಿರಾಕರಿಸಿದ ಅವರು, ಟಿಟಿಇಗೆ ಮಾತ್ರ ಟಿಕೆಟ್ ತೋರಿಸುವುದಾಗಿ ಹೇಳಿದರು.
ಈ ಸಂಬಂಧ ಎಎಸ್‌ಐ ಪ್ರಮೋದ್ ಅವರನ್ನು ಕೇಳಿದಾಗ, ಟಿಕೆಟ್ ರಹಿತ ಪ್ರಯಾಣಿಕರನ್ನು ರೈಲಿನಿಂದ ಹೊರಬರಲು ಮಾತ್ರ ಕೇಳಿದ್ದೇನೆ ಅಷ್ಟೇ ಎಂದರು.