ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಕೆಲ ದಿನಗಳ ಹಿಂದೆ ನಡೆದ ವಿದ್ಯಾರ್ಥಿ ಕೊಲೆಯನ್ನು ಪೊಲೀಸರು ಬೇಧಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನನ್ನು ಆತನ ಇಬ್ಬರು ಸಹಪಾಠಿಗಳು ಥಳಿಸಿ ಕೊಂದಿದ್ದಾರೆ. ಗುರುವಾರ ರಾತ್ರಿ ಆಗ್ನೇಯ ದೆಹಲಿಯ ಬದರ್‌ಪುರ ಬಳಿಯ ಕಾಲುವೆಯಲ್ಲಿ ಶಾಲಾ ಸಮವಸ್ತ್ರದಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಶಾಲಾ ಬ್ಯಾಗ್ ಕೂಡ ಕಾಲುವೆಯ ಪಕ್ಕದಲ್ಲಿ ಬಿದ್ದಿತ್ತು. ಮೃತ ಬಾಲಕ ಇಲ್ಲಿನ ಸಮೀಪದ ಮೊಲದ್‌ಬಂದ್ ಗ್ರಾಮದ ಬಿಲಾಸ್‌ಪುರ ಕ್ಯಾಂಪ್‌ನ ಸೌರಭ್ (12) ಎಂದು ಗುರುತಿಸಲಾಗಿತ್ತು. ಬಳಿಕ ತನಿಖೆ ಕೈಗೊಂಡ ಪೊಲೀಸರಿಗೆ ಅಚ್ಚರಿ ಸಂಗತಿಯೊಂದು ಬೆಳಕಿಗೆ ಬಂತು.
ನಿಜವಾದ ತಾಯಿಯ ಆತಂಕ: ಗುರುವಾರದಂದು ನನ್ನ ಮಗ ಶಾಲೆಗೆ ಹೋಗಿದ್ದು, ಮನೆಗೆ ಬಂದಿಲ್ಲ. ಹುಡುಕಾಟ ನಡೆಸಿದ ಬಳಿಕ ಪೊಲೀಸರಿಗೆ ನಾಪತ್ತೆ ಆಗಿರುವ ಬಗ್ಗೆ ದೂರು ನೀಡಿದ್ದೇವು. ನಿನ್ನೆ ನಾನು ನನ್ನ ಮಗನೊಂದಿಗೆ ಶಾಲೆಗೆ ಹೋಗಿದ್ದೆ. ನನ್ನ ಮಗ ಆ ವರ್ಗ ವಿಭಾಗವನ್ನು ಬದಲಾಯಿಸಲು ಬಯಸಿದ್ದನು. ಅವರ ವಿಭಾಗದಲ್ಲಿ ದೊಡ್ಡ ಹುಡುಗರಿದ್ದಾರೆ. ನಾನು ಅವರೊಂದಿಗೆ ಕಲಿಯಲು ಆಗುವುದಿಲ್ಲ. ಶಿಕ್ಷಕರೊಂದಿಗೆ ಮಾತನಾಡಿದರೂ ಅವರು ನನ್ನ ವಿಭಾಗವನ್ನು ಬದಲಾಯಿಸಲಿಲ್ಲ ಎಂದು ನನ್ನ ಮಗ ನನಗೆ ಹೇಳಿದ್ದ ಅಂತಾ ವಿದ್ಯಾರ್ಥಿಯ ತಾಯಿ ದರ್ಪಣ್ ತಿಳಿಸಿದ್ದಾರೆ.
ನಂತರ ನಾನು ಮಗನನ್ನು ಶಾಲೆಗೆ ಬಿಟ್ಟು ನನ್ನ ಕರ್ತವ್ಯಕ್ಕೆ ಹೋಗಿದ್ದೆ. ಸಂಜೆ ಏಳು ಗಂಟೆಯಾದರೂ ನನ್ನ ಮಗ ಮನೆಗೆ ಬಂದಿರಲಿಲ್ಲ ಎಂದು ಕರೆ ಬಂತು. ಗಾಬರಿಗೊಂಡು ನಾನು ಶಾಲೆಗೆ ತೆರಳಿ ಹುಡುಕಲು ಪ್ರಾರಂಭಿಸಿದೆ. ಆದ್ರೆ ಅವನ ಸುಳಿವು ಎಲ್ಲೂ ಸಿಗಲಿಲ್ಲ. ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದೇವು ಎಂದು ತಾಯಿ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಡಿಸಿಪಿ ರಾಜೇಶ್ ದೇವ್, ಗುರುವಾರ ರಾತ್ರಿ 8:20ಕ್ಕೆ ಸಮವಸ್ತ್ರದಲ್ಲಿದ್ದ ಮಗುವಿಗೆ ಥಳಿಸಲಾಗಿದೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದಾಗ 12-13 ವರ್ಷದ ಬಾಲಕನ ಶವ ಪತ್ತೆಯಾಗಿದೆ. ದೇಹದ ಮೇಲ್ಭಾಗವು ಚರಂಡಿಯ ಜೊತೆಗೆ ಮುಳುಗಿತ್ತು. ಅಲ್ಲಿ ನಾಲ್ಕೈದು ರಕ್ತದ ಕಲ್ಲುಗಳು ಮತ್ತು ಒಂದು ಮಡಕೆ ಪತ್ತೆಯಾಗಿದೆ. ಮೃತರನ್ನು 12 ವರ್ಷದ ಸೌರಭ್ ಎಂದು ಗುರುತಿಸಲಾಗಿದ್ದು, ತಾಜ್‌ಪುರ ಪಹಾರಿ ಎಂಸಿಡಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಎಂಬುದು ತಿಳಿಯಿತು. ಆತನ ತಲೆಯ ಮೇಲೆ ಹಲವೆಡೆ ಗಾಯದ ಗುರುತುಗಳು ಕಂಡುಬಂದಿವೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ತನಿಖೆಯ ವೇಳೆ ಒಂದೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು. ಈ ಇಬ್ಬರು ಆರೋಪಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಸಿಗರೇಟ್ ಸೇದುತ್ತಿದ್ದಾಗ ಸೌರಭ್ ನೋಡಿದ್ದು, ಶಿಕ್ಷಕರಿಗೆ ಹೇಳುವುದಾಗಿ ತಿಳಿಸಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕರಿಬ್ಬರು ಸೌರಭ್‌ನನ್ನು ಶಾಲೆಯಿಂದ ಕೊಂಚ ದೂರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಳಿಕ ಸೌರಭ್ಗೆ ಕಲ್ಲು ಮತ್ತು ಮಡಿಕೆಯಿಂದ ತೀವ್ರವಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೌರಭ್ ಅಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಕುರಿತು ಬದರ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಅನುಸರಿಸಿದ್ದಾರೆ.