ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 8ನೇ ಕಂತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು 19,000 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಹಣ ಬಿಡುಗಡೆ ಮಾಡಿದ ಪ್ರಧಾನಿ, ಅಕ್ಷಯ ತೃತೀಯದ ಈ ಶುಭ ದಿನದಂದು 19,000 ಕೋಟಿ ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮೆಯಾಗಿದೆ. ಇದರಿಂದ ಸುಮಾರು 10 ಕೋಟಿ ರೈತರಿಗೆ ಅನುಕೂಲವಾಗಲಿದೆ. ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದರು.
ಕೋವಿಡ್ನ ಕಠಿಣ ಸವಾಲುಗಳ ಮಧ್ಯೆ ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ದಾಖಲೆ ಮಾಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯಲ್ಲಿ ಸರ್ಕಾರ ಪ್ರತಿವರ್ಷ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಎಂಎಸ್‌ಪಿಯಲ್ಲಿ ಶೇ.10ರಷ್ಟು ಹೆಚ್ಚಿನ ಗೋಧಿ ಖರೀದಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ಇದನ್ನೂ ಓದಿ: 'ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು..' ಸಮಾನತೆಯ ಹರಿಕಾರ ಜಗಜ್ಯೋತಿ ಬಸವಣ್ಣ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಕಾರ ಪ್ರತಿ ವರ್ಷ ರೈತರ ಖಾತೆಗಳಿಗೆ ಮೂರು ಹಂತಗಳಲ್ಲಿ 6 ಸಾವಿರ ರೂ. ಜಮಾವಣೆಯಾಗುತ್ತಿದ್ದು, ಪ್ರತಿ ನಾಲ್ಕು ತಿಂಗಳಿಗೆ ಒಂದು ಸಲ 2 ಸಾವಿರ ರೂ. ವರ್ಗಾವಣೆಯಾಗುತ್ತದೆ.
7ನೇ ಕಂತಿನ ಹಣ ಬಿಡುಗಡೆ ವೇಳೆ ಮಾತನಾಡಿದ್ದ ಮೋದಿ, ಯೋಜನೆಯ ಪ್ರಯೋಜನಗಳನ್ನು ರೈತರಿಗೆ ತಲುಪಲು ಅನುಮತಿಸದ ಏಕೈಕ ರಾಜ್ಯವೆಂದರೆ ಅದು ಪಶ್ಚಿಮ ಬಂಗಾಳ. ಸಿಎಂ ಮಮತಾ ಬ್ಯಾನರ್ಜಿಯ ಸಿದ್ಧಾಂತವು ರಾಜ್ಯವನ್ನು ನಾಶಪಡಿಸಿದೆ. ರೈತರ ವಿರುದ್ಧ ಅವರು ತೆಗೆದುಕೊಂಡ ಕ್ರಮಗಳು ನನಗೆ ತುಂಬಾ ನೋವುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.