ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಮತ್ತೆ ಜೋರಾಗುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಇದರ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ರಾಜ್ಯದ ಸಿಎಂಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಮಹಾರಾಷ್ಟ್ರ, ಪಂಜಾಬ್, ಕೇರಳ, ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣ ಏರಿಕೆಯಾಗುತ್ತಿರುವ ಕಾರಣ ನಮೋ ಮಾರ್ಚ್ 17ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಮಹತ್ವದ ಸಭೆ ನಡೆಸಲಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡುವ ಸಾಧ್ಯತೆ ಇದೆ. ಇದೇ ವೇಳೆ ಕೊರೊನಾ ಟೆಸ್ಟ್, ವ್ಯಾಕ್ಸಿನ್ ನೀಡಿಕೆ ಬಗ್ಗೆ ಸಮಾಲೋಚನೆ ನಡೆಸುತ್ತಾರೆ ಎಂಬ ಮಾಹಿತಿ ಇದೆ. ಮಾರ್ಚ್ 17ರ ಮಧ್ಯಾಹ್ನ 12:30ಕ್ಕೆ ಸಭೆ ನಿಗದಿಯಾಗಿದೆ.
ಕಳೆದ 85 ದಿನಗಳಲ್ಲಿ ಇಂದೇ ಅತಿ ಹೆಚ್ಚು ಅಂದರೆ 26,291 ಕೇಸ್ ದಾಖಲಾಗಿದ್ದು, ಮಹಾರಾಷ್ಟ್ರದಲ್ಲೇ 15 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: ಕೋವಿಡ್-19 ವ್ಯಾಕ್ಸಿನೇಷನ್.. ಲಸಿಕೆ ತೆಗೆದುಕೊಳ್ಳುವವರಿಗೆ ಕೆಲ ಸಲಹೆಗಳು
ದೇಶದಲ್ಲಿ ಇಲ್ಲಿಯವರೆಗೆ 1,58,725 ಜನರು ಸಾವನ್ನಪ್ಪಿದ್ದು, ಕಳೆದ 24 ಗಂಟೆಯಲ್ಲಿ 118 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಸದ್ಯ ದೇಶದಲ್ಲಿ 2,19,262 ಆ್ಯಕ್ಟಿವ್ ಕೇಸ್ಗಳಿದ್ದು, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್ ಹಾಗೂ ತಮಿಳುನಾಡು, ಕೇರಳ ಜತೆಗೆ ಪಂಜಾಬ್ನಲ್ಲೂ ಇದರ ಎರಡನೇ ಹಂತದ ಹಾವಳಿ ಜೋರಾಗಿ ಬೀಸುತ್ತಿದೆ.