ನವದೆಹಲಿ : ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 26 ಮತ್ತು 27 ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.
ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ಮೂರು ಪ್ರಮುಖ ಕಾರ್ಯಕ್ರಮಗಳಾದ, ಶೇಖ್ ಮುಜೀಬುರ್ರಹ್ಮಾನ್ ಅವರ ಜನ್ಮ ಶತಮಾನೋತ್ಸವ 'ಮುಜೀಬ್ ಬೋರ್ಶೊ', ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿ 50 ವರ್ಷಗಳಾಗಿರುವ ಕಾರ್ಯಕ್ರಮ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದ 50ನೇ ವರ್ಷಾಚರಣೆಯಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಭೇಟಿ ವೇಳೆ ಮಾರ್ಚ್ 26 ರಂದು ಬಾಂಗ್ಲಾದೇಶದ ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮೋದಿ ಭಾಗವಹಿಸಲಿದ್ದಾರೆ. ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸುವ ಕಾರ್ಯಕ್ರಮದೊಂದಿಗೆ, ಬಾಂಗ್ಲಾದೇಶದ ಅಧ್ಯಕ್ಷ ಎಂ.ಡಿ ಅಬ್ದುಲ್ ಹಮೀದ್ ಅವರ ಕರೆಯ ಮೇರೆಗೂ ಪ್ರಧಾನಿ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ 2015 ರಲ್ಲಿ ಕೊನೆಯ ಬಾರಿಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು.