ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲಿ ಭಯೋತ್ಪಾದನೆ ನಿಗ್ರಹ, ವ್ಯಾಪಾರ, ಆರೋಗ್ಯ, ಇಂಧನ ಮತ್ತು ಕೊರೊನಾ ವೈರಸ್ ಕುರಿತ, ಸಮಸ್ಯೆ ಸರಿದೂಗಿಸುವ ಮಾರ್ಗಗಳ ಬಗ್ಗೆ ಚರ್ಚೆಯಾಗಲಿದೆ.
ಬ್ರೆಜಿಲ್ - ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಗುಂಪಿನ 12ನೇ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸಲಿದ್ದಾರೆ.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾಗಿರುವ ಭಾರತ ಮತ್ತು ಚೀನಾ ಎರಡು ಲಡಾಖ್ ಗಡಿಯಲ್ಲಿ ಕಳೆದ ಆರು ತಿಂಗಳಿಗೂ ಹೆಚ್ಚು ಕಾಲ ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸಿವೆ. ಆದರೆ, ಇದೀಗ ಮತ್ತೆ ಒಂದೇ ವೇದಿಕೆಯಲ್ಲಿ ಉಭಯ ನಾಯಕರು ಮುಖಾಮುಖಿಯಾಗಲಿದ್ದು, ಕುತೂಹಲಕ್ಕೂ ಕಾರಣವಾಗಿದೆ. ಇದಕ್ಕೂ ಮೊದಲು ನವೆಂಬರ್ 10ರಂದು ನಡೆದ ಶಾಂಘೈ ಸಹಕಾರ ಒಕ್ಕೂಟದ ವಾರ್ಷಿಕ ಶೃಂಗಸಭೆಯಲ್ಲೂ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದರು.
ಅಧ್ಯಕ್ಷ ಪುಟಿನ್ ಅವರ ಆಹ್ವಾನದ ಮೇರೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 17 ರಂದು 'ಜಾಗತಿಕ ಸ್ಥಿರತೆ, ಹಂಚಿಕೆಯ ಭದ್ರತೆ ಮತ್ತು ನವೀನ ಬೆಳವಣಿಗೆ' ಎಂಬ ವಿಷಯದ ಅಡಿ ರಷ್ಯಾ ಆಯೋಜಿಸುವ 12 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಂದು ಸಂಜೆ ವೇಳೆಗೆ ಸಭೆ ಆರಂಭವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಬ್ರಿಕ್ಸ್ ಸಭೆಗಳು ಆರಂಭವಾದಾಗಿನಿಂದ ಭಾರತ ಇಂದು 12ನೇ ಸಭೆಯಲ್ಲಿ ಭಾಗಿಯಾಗುತ್ತಿದೆ ಅಲ್ಲದೆ 13ನೇ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಸಚಿವಾಲಯ ತಿಳಿಸಿದೆ.