ಈರೋಡ್(ತಮಿಳುನಾಡು) : ತಮಿಳುನಾಡನ್ನ ಮುಖ್ಯಭೂಮಿಕೆಗೆ ತಂದಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ತಮಿಳುನಾಡಿನ ಈರೋಡ್‌ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ತಮಿಳುನಾಡನ್ನು ಮುಖ್ಯವಾಹಿನಿಗೆ ತಂದಿದ್ದಾರೆ. 13ನೇ ಹಣಕಾಸು ಆಯೋಗದಲ್ಲಿ ತಮಿಳುನಾಡಿಗೆ ಕೇವಲ 94,000 ಕೋಟಿ ರೂ. ಮಾತ್ರ ಅನುದಾನ ಸಿಕ್ಕಿತ್ತು.
ಆದರೆ, ಪಿಎಂ ಮೋದಿ ನೇತೃತ್ವದ 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 5.42 ಲಕ್ಷ ಕೋಟಿ ರೂ. ಸಿಕ್ಕಿದೆ. ಇದು ಈ ಹಿಂದಿಗಿಂತ 4.5 ಪಟ್ಟು ಹೆಚ್ಚು ಎಂದು ನಡ್ಡಾ ಹೇಳಿದರು. ರಾಷ್ಟ್ರದಲ್ಲೇ ಅತಿ ಹೆಚ್ಚು ಸಂಖ್ಯೆಯ ಅಂದರೆ 11 ವೈದ್ಯಕೀಯ ಕಾಲೇಜುಗಳನ್ನು ತಮಿಳುನಾಡಿಗೆ ನೀಡಲಾಗಿದೆ.
ಮುದ್ರಾ ಯೋಜನೆಯ ಗರಿಷ್ಠ ಫಲಾನುಭವಿಗಳು ತಮಿಳುನಾಡಿನವರು. ರೇಷ್ಮೆ ಅಭಿವೃದ್ಧಿಗೆ 1,600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ತಂಜಾವೂರಿನ ವರ್ಣಚಿತ್ರಗಳು, ಮರದ ಕೆತ್ತನೆಗಳು, ಕೈಮಗ್ಗ ನೇಯ್ಗೆ, ಕಲ್ಲು ಕೆತ್ತನೆ ಸೇರಿ ಅನೇಕ ವೃತ್ತಿಗಳಿಗೆ 'ಲೋಕಲ್ ಫಾರ್ ವೋಕಲ್'ಅಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ನಂದಿಗ್ರಾಮವನ್ನ ದೀದಿ ಕಳೆದುಕೊಳ್ಳಲಿದ್ದು, ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ: ನಡ್ಡಾ
ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರಾಗಿದ್ದ ಹಾಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ಇಬ್ಬರೂ ತಮಿಳುನಾಡಿನವರು ಎಂದು ಇದೇ ವೇಳೆ ಹೇಳಿದ ನಡ್ಡಾ ಜನರ ಗಮನ ಸೆಳೆದರು.
ಮನೆಗಳ ಮೇಲೆ ಬಾಂಬ್ ದಾಳಿ ನಡೆದ ಬಳಿಕ ಶ್ರೀಲಂಕಾದ ಜಾಫ್ನಾಗೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ ಜೀ ಆಗಿದ್ದಾರೆ. ಅಲ್ಲಿನ ಮನೆಗಳನ್ನು ಪುನರ್ ನಿರ್ಮಿಸಿದರು. ಜೈಶಂಕರ್ ಅವರನ್ನು ಶ್ರೀಲಂಕಾಕ್ಕೆ ಕಳುಹಿಸಿ, ಅಲ್ಲಿನ ತಮಿಳು ಅಲ್ಪಸಂಖ್ಯಾತರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದರು ಎಂದು ತಮಿಳಿಗರ ಮೇಲಿನ ಪಿಎಂ ಮೋದಿ ಕಾಳಜಿಯನ್ನು ನಡ್ಡಾ ವಿವರಿಸಿದರು.
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಎಂಕೆ-ಕಾಂಗ್ರೆಸ್-ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ.