ಕೆವಾಡಿಯಾ, ಗುಜರಾತ್: ಹವಾಮಾನ ಬದಲಾವಣೆ ಮತ್ತು ತಾಪಮಾನವನ್ನು ಕಾಪಾಡುವುದರೊಂದಿಗೆ ಪರಿಸರ ರಕ್ಷಣೆಯಲ್ಲಿ ಸಾಮೂಹಿಕ ಮತ್ತು ವೈಯಕ್ತಿಕ ಜವಾಬ್ದಾರಿ ತೋರುವ ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಜೊತೆಗೂಡಿ ಉದ್ಘಾಟಿಸಿದರು.
ಗುಜರಾತ್ನ ಕೆವಾಡಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರಕ್ಕಾಗಿ ಜೀವನ ಯೋಜನೆಯನ್ನು ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ಹವಾಮಾನ ಬದಲಾವಣೆಯ ಸಮಸ್ಯೆ ವಿಶ್ವದೆಲ್ಲೆಡೆ ಕಂಡು ಬರುತ್ತಿದೆ. ಹಿಮನದಿಗಳು ಕರಗುತ್ತಿವೆ. ಇತರ ನದಿಗಳು ಕಮರುತ್ತಿವೆ. ಹವಾಮಾನ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಈ ಮಿಷನ್ ಲೈಫ್ ಸಹಾಯ ಮಾಡುತ್ತದೆ ಎಂದು ಹೇಳಿದರು.
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ವಿಶ್ವ ಅನುಭವಿಸುತ್ತಿದೆ. ಇದರ ತಡೆಗೆ ನೀತಿ ರೂಪಿಸುವ ಜೊತೆಗೆ ಪಾಲನೆಯೂ ಅಗತ್ಯವಾಗಿದೆ. ಕೆಲವು ಜನರು ಎಸಿಯ ತಾಪಮಾನವನ್ನು 17 ಡಿಗ್ರಿಗಳಿಗೆ ಇಳಿಸಲು ಬಯಸುತ್ತಾರೆ. ಇದು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜಿಮ್‌ಗಳಿಗೆ ಹೋಗುವಾಗ ಸೈಕಲ್ ಬಳಸಿ. ನಮ್ಮ ಜೀವನಶೈಲಿ ಪರಿಸರಕ್ಕೆ ತಕ್ಕಂತೆ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮರುಬಳಕೆ, ಮಿತಬಳಕೆ, ಪುನರ್ಬಳಕೆಯನ್ನು ರೂಢಿಸಿಕೊಳ್ಳಬೇಕು. ಇದು ಭಾರತದ ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವಾಗಿವೆ. ಈ ಅಭ್ಯಾಸಗಳನ್ನು ಮರಳಿ ತರಬೇಕು. ಸುಸ್ಥಿರ ಆಯ್ಕೆ ನಮ್ಮದಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಲೈಫ್ಗೆ ವಿದೇಶಿ ನಾಯಕರು ಏನಂದ್ರು: ಭೂಮಿ ಮತ್ತು ನಮ್ಮ ಭವಿಷ್ಯ ರಕ್ಷಿಸಲು ಸಾಮೂಹಿಕ ಮತ್ತು ವೈಯಕ್ತಿಕ ಕಾರ್ಯಕ್ರಮಗಳ ಭಾಗವಾಗಿ ನಾವಿರಬೇಕು ಎಂದು 'ಮಿಷನ್ ಲೈಫ್' ಕುರಿತು ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್ ಹೇಳಿದರು.
ಪ್ರಜಾಪ್ರಭುತ್ವದ ಹಾದಿಯಲ್ಲಿ ನಾವು ಪರಿಸರ ರಕ್ಷಣೆ ಮತ್ತು ಆರ್ಥಿಕತೆ ಸಬಲತೆಗೆ ಒಟ್ಟಾಗಿ ಕೆಲಸ ಮಾಡಬೇಕಿದೆ. ಪರಿಸರ ಸಂರಕ್ಷಣೆಯಲ್ಲಿ ಭಾರತದಂತಹ ರಾಷ್ಟ್ರಗಳೊಂದಿಗೆ ನಾವು ಬೆಂಬಲವಾಗಿದ್ದೇವೆ. ಮಿಷನ್ ಲೈಫ್ ಪ್ರಾರಂಭಿಸುವಲ್ಲಿ ಭಾರತದ ನಾಯಕತ್ವವನ್ನು ನಾನು ಶ್ಲಾಘಿಸುತ್ತೇನೆ ಎಂದು ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಹೇಳಿದರು.
ಭಾರತದ ಅಧ್ಯಕ್ಷತೆಯಲ್ಲಿ ಮುಂದಿನ ವರ್ಷ ನಡೆಯುವ G20 ಸಭೆಯಲ್ಲಿ ಲೈಫ್ ಯೋಜನೆಯನ್ನು ಯಶಸ್ವಿಗೊಳಿಸಲು ಭಾರತದ ಜೊತೆಗೆ ಫ್ರಾನ್ಸ್ ಕೈಜೋಡಿಸಲಿದೆ. ವಿಶ್ವದಲ್ಲಿ ಹೆಚ್ಚುತ್ತಿರುವ ಹವಾಮಾನ ಬದಲಾವಣೆ, ಜಾಗತಿಕ ಸವಾಲುಗಳನ್ನು ಮುಂದಿನ ದಿನಗಳಲ್ಲಿ ಎದುರಿಸಲು ಸಾಧ್ಯವಿಲ್ಲದ ಕಾರಣ ಇಂದೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಿಷನ್ ಲೈಫ್ ಅನಾವರಣ ಸಂದೇಶದಲ್ಲಿ ಹೇಳಿದ್ದಾರೆ.
ಏನಿದು ಮಿಷನ್ ಲೈಫ್: ನವೆಂಬರ್ 1 ರಂದು ಗ್ಲಾಸ್ಗೋದಲ್ಲಿ ನಡೆದ ಕಾಪ್26 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪರಿಸರಕ್ಕಾಗಿ ಜೀವನ (ಲೈಫ್) ಪರಿಕಲ್ಪನೆ ಬಿಚ್ಚಿಟ್ಟರು. ವೈಯಕ್ತಿಕ ಮತ್ತು ಜಾಗತಿಕ ಸಮುದಾಯ ಇದರಲ್ಲಿ ಭಾಗವಹಿಸಿ ಆಂದೋಲನದ ಮಾದರಿ ಪರಿಸರ ರಕ್ಷಣೆಗೆ ಪಣ ತೊಡಬೇಕು ಎಂದು ಮನವಿ ಮಾಡಿದ್ದರು. ಭೂಮಿಗೆ ಹೊಂದಿಕೆಯಾಗುವ ಮತ್ತು ಹಾನಿಯಾಗದ ಜೀವನವನ್ನು ನಡೆಸುವುದು ಇದರ ಉದ್ದೇಶವಾಗಿದೆ. ಇದು ಪರಿಸರ ಸಂರಕ್ಷಣೆಗೆ ಕಾರಣವಾಗುತ್ತದೆ.
ಇದರಲ್ಲಿ ತೊಡಗಿಸಿಕೊಳ್ಳು ಜನರನ್ನು "ಪ್ರೊ-ಪ್ಲಾನೆಟ್ ಪೀಪಲ್" ಎಂದು ಕರೆಯಲಾಗುತ್ತದೆ. ಮಿತ ಬಳಕೆ, ಮರುಬಳಕೆ ಪರಿಕಲ್ಪನೆಗಳನ್ನು ಇದರ ಪರಿಕಲ್ಪನೆಯಾಗಿದೆ. ಈ ಮಿಷನ್ ಪರಿಸರವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. 2028 ರ ವೇಳೆಗೆ ಭಾರತದಲ್ಲಿನ ಎಲ್ಲಾ ಗ್ರಾಮಗಳು ಮತ್ತು ನಗರಗಳನ್ನು ಕನಿಷ್ಠ 80% ರಷ್ಟು ಪರಿಸರ ಸ್ನೇಹಿಯಾಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಓದಿ: ಭಾರಿ ಮಳೆಗೆ ಗೋಡೆ ಕುಸಿದು ಹಲವಾರು ಕಾರುಗಳು ಜಖಂ.. ಕೃತಕ ಜಲಪಾತ ಸೃಷ್ಟಿ, ರಸ್ತೆಯಲ್ಲೇ ನಿಂತ ನೀರು!