ಮುಂಬೈ: ಕೋವಿಶೀಲ್ಡ್ ಲಸಿಕೆ ಉತ್ಪಾದಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ ಮತ್ತು ಅವರ ಕುಟುಂಬಕ್ಕೆ 'Z ಪ್ಲಸ್' ಭದ್ರತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಬುಧವಾರ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಬೆದರಿಕೆ ಆರೋಪದಡಿ ಪೂನವಾಲ್ಲಾ ಪರವಾಗಿ ವಕೀಲರಾದ ದತ್ತಾ ಮಾನೆ ಅವರು ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಬೆದರಿಕೆ ಹಾಕುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯಗಳಿಗೆ ಪೂರೈಸುವ ಕೋವಿಶೀಲ್ಡ್ ಲಸಿಕೆ ದರ ಇಳಿಕೆ: ಸೀರಮ್ ಸಿಇಒ ಘೋಷಣೆ
ಮೇ 2ರಂದು ಲಂಡನ್ ಸುದ್ದಿಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಆದರ್ ಪೂನವಾಲ್ಲಾ ಅವರು, ಕೋವಿಡ್ ಲಸಿಕೆಯನ್ನು ತ್ವರಿತವಾಗಿ ಪೂರೈಸಬೇಕೆಂದು ಭಾರತದ ಕೆಲ ರಾಜಕಾರಣಿಗಳು ಹಾಗೂ ಕೆಲ ಪ್ರಭಾವಿ ವ್ಯಕ್ತಿಗಳು ಒತ್ತಡ ಹೇರಿ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಿದ್ದರು. ಅಲ್ಲದೇ ಬ್ರಿಟನ್ನಲ್ಲಿ ಹೊಸ ಲಸಿಕೆ ಉತ್ಪಾದನೆ ಆರಂಭಿಸುತ್ತಿರುವುದಕ್ಕೆ ನಿಂದಿಸುತ್ತಿದ್ದಾರೆ ಎಂದು ಹೇಳಿದ್ದರು.
ಈಗಾಗಲೇ ಬೆದರಿಕೆ, ಒತ್ತಡದಿಂದಾಗಿ ಪೂನವಾಲ್ಲಾ ಮತ್ತು ಅವರ ಕುಟುಂಬ ಲಂಡನ್ಗೆ ತೆರಳಿದೆ. ಪೂನವಾಲ್ಲಾಗೆ 'Y+' ಸೆಕ್ಯುರಿಟಿ ನೀಡುವುದಾಗಿ ಈ ಹಿಂದೆ ಕೇಂದ್ರ ಗೃಹ ಸಚಿವಾಲಯ ತಿಳಿಸಿತ್ತು. ಇದೀಗ Z ಪ್ಲಸ್ ಭದ್ರತೆ ಒದಗಿಸಬೇಕೆಂದು ಹಾಗೂ ಬೆದರಿಕೆ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಬೇಕೆಂದು ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.