ಚೆನ್ನೈ: ತಮಿಳುನಾಡಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ ಎಲ್ಟಿಟಿಇ ಮಾದರಿಯಲ್ಲಿಯೇ ಸಂಘಟನೆಯೊಂದನ್ನು ರೂಪಿಸುತ್ತಿದ್ದ ಮಾಸ್ಟರ್ಮೈಂಡ್ಗಳನ್ನು ರಾಷ್ಟ್ರೀಯ ಗುಪ್ತಚರ ಸಂಸ್ಥೆ(ಎನ್ಐಎ) ಬಂಧಿಸಿದೆ. ಅಲ್ಲದೇ, ಬಂದೂಕು, ಗುಂಡುಗಳನ್ನು ತಯಾರಿಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ಜಪ್ತಿ ಮಾಡಿದೆ.
ಪದವೀಧರನಾದ ಸೇಲಂನ ನವೀನ್ ಚಕ್ರವರ್ತಿ, ಈತನ ಸ್ನೇಹಿತ ಸೆವ್ವಾಯಿಪೇಟೆಯ ಸಂಜಯ್ ಪ್ರಕಾಶ್ ಬಂಧಿತರು. ಬಂಧಿತ ಆರೋಪಿಗಳು ಸೇಲಂನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಅಲ್ಲಿ ಅವರು ಯೂಟ್ಯೂಬ್ ವೀಕ್ಷಿಸಿ ಬಂದೂಕುಗಳನ್ನು ತಯಾರಿಸುತ್ತಿದ್ದರು. ಮನೆಯಲ್ಲಿ ಬಂದೂಕು ತಯಾರಿಕೆಗೆ ಬೇಕಾದ ಎಲ್ಲ ಸ್ಫೋಟಕ ಪರಿಕರಗಳನ್ನು ಇಟ್ಟುಕೊಂಡಿದ್ದರು.
ವಾಹನ ತಪಾಸಣೆ ನಡೆಸುತ್ತಿದ್ದಾಗ ಅನುಮಾನಾಸ್ಪದ ಕಂಡುಬಂದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಿದ್ದಾರೆ. ಆಗ ಅವರು ನೀಡಿದ ಮಾಹಿತಿ ಆಧಾರದ ಮೇಲೆ ಮನೆಯ ಮೇಲೆ ದಾಳಿ ಮಾಡಿದಾಗ ಪಿಸ್ತೂಲ್‌ಗಳು, ಬಂದೂಕು ತಯಾರಿಸುವ ಸ್ಫೋಟಕ ಉಪಕರಣಗಳು, ಚಾಕುಗಳು ಪತ್ತೆಯಾಗಿವೆ.
ಪ್ರಕೃತಿ ವಿನಾಶ ತಡೆಯಲು ಸಂಘಟನೆ: ಇಬ್ಬರನ್ನೂ ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ "ಸೇಲಂ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಹದ್ದು ಮೀರಿದೆ. ಇದು ಪ್ರಕೃತಿಯ ಮೇಲೆ ಭೀಕರ ಪರಿಣಾಮ ಉಂಟು ಮಾಡಿದೆ. ಇದನ್ನು ತಡೆಯಲು ಎಲ್ಟಿಟಿಇ ಮಾದರಿಯಲ್ಲಿ ಸಂಘಟನೆ ರೂಪಿಸಲಾಗುತ್ತಿತ್ತು. ದಾಳಿಗಳಿಗೆ ಅಗತ್ಯವಿರುವ ಸ್ಫೋಟಕಗಳನ್ನು ಸಂಗ್ರಹಿಸಲಾಗುತ್ತಿತ್ತು" ಎಂದು ಉಸುರಿದ್ದಾರೆ.
ಇಬ್ಬರನ್ನೂ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿಸಿ, ಜೈಲಿಗಟ್ಟಲಾಗಿದೆ. ಅಲ್ಲದೇ, ಇವರನ್ನು ಬೆಂಬಲಿಸುತ್ತಿದ್ದ ಇನ್ನೊಬ್ಬನನ್ನೂ ಹೆಡೆಮುರಿ ಕಟ್ಟಲಾಗಿದೆ. ಗಂಭೀರವಾದ ಕಾರಣ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು. ಬಂಧಿತ ಯುವಕರು ನಿಷೇಧಿತ ಸಂಘಟನೆಯಾದ ಎಲ್ಟಿಟಿಇ ಜೊತೆಗೆ ಸಂಬಂಧ ಹೊಂದಿರುವ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದೆ.
ಓದಿ: ಉಗ್ರ ದಾಳಿ ಬೆದರಿಕೆ.. ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲೆ 1 ಸಾವಿರ ಸಿಸಿಟಿವಿ ಅಳವಡಿಕೆ