ನವದೆಹಲಿ: ಇತ್ತೀಚೆಗಷ್ಟೇ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಇಂದು (ಗುರುವಾರ) ಸಂವಿಧಾನ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಮಾಜಸೇವೆಗೆ ಜೀವನವನ್ನು ಮುಡಿಪಾಗಿಟ್ಟಿರುವ, ಕಳೆದ 5 ದಶಕಗಳಿಂದ ಸಮಾಜದ ಒಳಿತಿಗೆ ಕೆಲಸ ಮಾಡುತ್ತಿರುವ ಹೆಗ್ಗಡೆಯವರು ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗದ ಉತ್ತೇಜನಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದ್ದಾರೆ. ಸ್ವಯಂ ಉದ್ಯೋಗವಕಾಶಗಳ ಬಗ್ಗೆ ಅರಿವು ಮೂಡಿಸಲು ಮತ್ತು ಗ್ರಾಮೀಣ ಯುವಕರಿಗೆ ತರಬೇತಿ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯನ್ನು (RDSETI) ಸ್ಥಾಪಿಸಿದ್ದಾರೆ.
ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿಗಳಾಗಿದ್ದಾರೆ. ಸ್ವಸಹಾಯ ಸಂಘ ಚಳುವಳಿ, ಆರ್ಥಿಕ ಸೇರ್ಪಡೆ, ಸರ್ವರಿಗೂ ಆದಾಯ, ಕೃಷಿಯಲ್ಲಿ ಸಶಕ್ತೀಕರಣ, ಮಹಿಳೆಯರ ಸಬಲೀಕರಣಕ್ಕಾಗಿ 'ಜ್ಞಾನವಿಕಾಸ'. ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವುದು, ಪ್ರತಿತಿಂಗಳು 13 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಮಾಸಾಶನ ನೆರವು, ವಿಶೇಷಚೇತನರಿಗೆ ನೆರವು, ಸ್ವಚ್ಛ ಭಾರತ ಅಭಿಯಾನ ಹೀಗೆ ಹತ್ತು ಹಲವಾರು ಸಮಾಜೋಪಯೋಗಿ ಕಾರ್ಯಕ್ರಮಗಳಲ್ಲಿ ಹೆಗ್ಗಡೆಯವರು ತೊಡಗಿಸಿಕೊಂಡಿದ್ದಾರೆ.
73 ವರ್ಷ ವಯಸ್ಸಿನ ಹೆಗ್ಗಡೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಆನುವಂಶಿಕ ಧರ್ಮದರ್ಶಿಯಾಗಿದ್ದಾರೆ. ಅವರ ಕುಟುಂಬದಲ್ಲಿ ತಂದೆಯಿಂದ ಮಗನಿಗೆ ಬಂದ ಸ್ಥಾನವನ್ನು ಅಲಂಕರಿಸಿದವರ ಸಾಲಿನಲ್ಲಿ ಅವರು 21 ನೇ ಸ್ಥಾನದಲ್ಲಿದ್ದಾರೆ.
ಹೆಗ್ಗಡೆಯವರ ನಾಮನಿರ್ದೇಶನದಿಂದ ಕರಾವಳಿ ಕರ್ನಾಟಕಕ್ಕೆ ರಾಜ್ಯಸಭೆಯಲ್ಲಿ ಮತ್ತೊಮ್ಮೆ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು ಸೆಪ್ಟೆಂಬರ್ 13, 2021 ರಂದು ನಿಧನರಾದ ನಂತರ ರಾಜ್ಯಸಭೆಯಲ್ಲಿ ಕರಾವಳಿ ಪ್ರದೇಶಕ್ಕೆ ಪ್ರಾತಿನಿಧ್ಯ ಇಲ್ಲದಂತಾಗಿತ್ತು.