ನವದೆಹಲಿ: ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಗೆ ಹೆಜ್ಜೆ ಹಾಕುತ್ತಿದೆ. ಆಗಸ್ಟ್ 4ರಂದು ರಾಜಧಾನಿಯಲ್ಲಿ ಸಾವಿರಾರು ಮಕ್ಕಳು ಒಟ್ಟಾಗಿ ಸೇರಿ ಅತಿದೊಡ್ಡ ತಿರಂಗವನ್ನು ರಚಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಲಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಈ ವಿಷಯವನ್ನು ಹೇಳಿದ್ದಾರೆ.
ಇಂದು ದೆಹಲಿ ಅಭಿವೃದ್ಧಿ ಕುರಿತು ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ಈ ಸಂದರ್ಭದಲ್ಲಿ ನಾವು 130 ಕೋಟಿ ಭಾರತೀಯರು ಒಗ್ಗೂಡಿ ಭಾರತವನ್ನು ವಿಶ್ವದ ಶ್ರೇಷ್ಠ ಮತ್ತು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಪ್ರತಿಜ್ಞೆ ಮಾಡೋಣ. 75 ವರ್ಷಗಳ ಹಿಂದೆ ಇಡೀ ದೇಶ ಒಗ್ಗೂಡಿ ಬ್ರಿಟಿಷರನ್ನು ಓಡಿಸಲಾಯಿತು. ಇಂದು ಭಾರತವನ್ನು ವಿಶ್ವದ ಶ್ರೇಷ್ಠ ದೇಶವನ್ನಾಗಿ ಮಾಡಲು ನಾವೆಲ್ಲರೂ ಮತ್ತೊಮ್ಮೆ ಒಗ್ಗೂಡಬೇಕಾಗಿದೆ ಎಂದರು.
ನಾವು ಬುದ್ಧಿವಂತ ಜನ: ಸಂಪನ್ಮೂಲಗಳ ವಿಷಯದಲ್ಲಿ ಇತರ ರಾಷ್ಟ್ರದೊಂದಿಗೆ ನಾವು ಸಮಾನವಾಗಿರಬೇಕು. ಪರ್ವತಗಳು, ನದಿಗಳು, ಖನಿಜಗಳು, ಸಸ್ಯವರ್ಗ, ಬೆಳೆಗಳು ಮತ್ತು ಸಮುದ್ರಗಳಂತಹ ಸಂಪತ್ತು ಸೇರಿದಂತೆ ನಮಗೆ ಬೇಕಾದ ಎಲ್ಲವನ್ನೂ ನಾವು ಹೊಂದಿದ್ದೇವೆ. ವಿಶ್ವದಲ್ಲಿ ಅತ್ಯಂತ ಬುದ್ಧಿವಂತ ಮತ್ತು ಕಷ್ಟಪಟ್ಟು ದುಡಿಯುವ ಜನರೆಂದರೆ ಅದು ಭಾರತೀಯರು. ನಾವು ಇದನ್ನು ಪ್ರತಿಬಿಂಬಿಸಬೇಕಿದೆ ಮತ್ತು ನಾವು ಇತರೆ ಕೆಲ ದೇಶಗಳಿಗಿಂತ ಏಕೆ ಹಿಂದುಳಿದಿದ್ದೇವೆ ಎಂಬುದನ್ನು ನಮಗೆ ನಾವು ಕೇಳಿಕೊಳ್ಳಬೇಕು ಎಂದರು.
ರಾಜಕಾರಣಿಗಳು ಅವರ ಇಚ್ಛೆಯಂತೆ ದೇಶವನ್ನು ಮುನ್ನಡೆಸಲು ನಾವು ಅನುಮತಿಸಿದರೆ ಮುಂದಿನ 75 ವರ್ಷಗಳಲ್ಲಿ ನಾವು ಮತ್ತಷ್ಟು ಹಿಂದೆ ಬೀಳುತ್ತೇವೆ. ಈ ಜವಾಬ್ದಾರಿ ರಾಷ್ಟ್ರದ 130 ಕೋಟಿ ನಾಗರಿಕರ ಮೇಲಿರಬೇಕು. ನಾವು 130 ಕೋಟಿ ಭಾರತೀಯರು ಭಾರತವನ್ನು ವಿಶ್ವದ ಶ್ರೇಷ್ಠ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ಒಟ್ಟಾಗಿ ಕೆಲಸ ಮಾಡಲು ಪ್ರತಿಜ್ಞೆ ಮಾಡಬೇಕು. ಭಾರತ ವಿಶ್ವದಲ್ಲಿಯೇ ಅತ್ಯುತ್ತಮ ರಾಷ್ಟ್ರವಾಗುವ ದಿನಗಳು ದೂರವಿಲ್ಲ ಎನ್ನುವುದಕ್ಕೆ ಸಾಮೂಹಿಕ ಪ್ರಯತ್ನ ಆಗಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಹಿಂದೂ ಯುವಕನೊಂದಿಗೆ ಮುಸ್ಲಿಂ ಯುವತಿ ವಿವಾಹ.. ಮಗಳನ್ನೇ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿದ ತಂದೆ!
ನೀವು ಏನು ಯೋಚಿಸುತ್ತೀರಿ? ಭಾರತ ಏಕೆ ವಿಶ್ವದ ಶ್ರೇಷ್ಠ ರಾಷ್ಟ್ರವಾಗಲು ಸಾಧ್ಯವಿಲ್ಲ? ಎಂಬ ಪ್ರಶ್ನೆಯನ್ನು ನಾನು ಎಲ್ಲರಲ್ಲಿ ಕೇಳುತ್ತಿದ್ದೇನೆ. ಇದನ್ನು ಸಾಧಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು. ಭಾರತೀಯರಲ್ಲಿ ಏಕತೆ ಇರಬೇಕು. ಎಲ್ಲಾ ಕ್ಷೇತ್ರದ ಜನರ ತಂಡವು ಭಾರತವನ್ನು ವಿಶ್ವದ ಶ್ರೇಷ್ಠ ರಾಷ್ಟ್ರವಾಗಲು ಸಹಾಯ ಮಾಡುತ್ತದೆ ಎಂದು ಕೇಜ್ರಿವಾಲ್ ಹೇಳಿದರು.