ಮುಂಬೈ (ಮಹಾರಾಷ್ಟ್ರ) : ಮುಂಬೈ- ಬೆಂಗಳೂರು ಸ್ಪೈಸ್‌ಜೆಟ್ ವಿಮಾನದೊಳಗಿನ ಶೌಚಾಲಯದೊಳಗೆ ಪ್ರಯಾಣಿಕರೊಬ್ಬರು ಒಂದೂವರೆ ಗಂಟೆಗೂ ಹೆಚ್ಚು ಅವಧಿ ಸಿಲುಕಿದ ಘಟನೆ ಮಂಗಳವಾರ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ನಿಲ್ದಾಣಕ್ಕೆ ವಿಮಾನ ಬಂದಿಳಿದ ಬಳಿಕ ಆತನನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಘಟನೆಯಿಂದ ಪ್ರಯಾಣಿಕ ಆಘಾತಕ್ಕೊಳಗಾಗಿದ್ದು, ವೈದ್ಯಕೀಯ ಸಲಹೆ ನೀಡಲಾಗುತ್ತಿದೆ.
ಮುಂಬೈ ವಿಮಾನ ನಿಲ್ದಾಣದಿಂದ ಇಂದು ಬೆಂಗಳೂರಿಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ಪ್ರಯಾಣಿಕ ಶೌಚಾಲಯ ತೆರಳಿದ್ದಾನೆ. ಈ ವೇಳೆ ಅದರ ಬಾಗಿಲು ಲಾಕ್ ಆಗಿದೆ. ಎಷ್ಟೇ ಪ್ರಯತ್ನಪಟ್ಟರೂ ತೆರೆಯಲಾಗಿಲ್ಲ. ವಿಮಾನ ಹಾರಾಟದ ವೇಳೆಯೇ ಈ ಅಚಾತುರ್ಯ ನಡೆದಿದೆ. ಇದರಿಂದ ಪ್ರಯಾಣಿಕ 1 ಗಂಟೆ, 40 ನಿಮಿಷಗಳ ಕಾಲ ಇಕ್ಕಟ್ಟಾದ ಶೌಚಾಲಯದಲ್ಲೇ ಸಿಲುಕುವಂತಾಗಿದೆ.
ಸಿಬ್ಬಂದಿ ಪ್ರಯಾಣಿಕನಿಗೆ ಧೈರ್ಯ ಹೇಳಿ, ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದ ಬಳಿಕ ಎಂಜಿನಿಯರ್ಗಳನ್ನು ಕರೆಯಿಸಿ ಶೌಚಾಲಯದ ಬಾಗಿಲನ್ನು ಓಪನ್ ಮಾಡಲಾಗಿದೆ. ಗಂಟೆಗಳ ಕಾಲ ಒಂದೆಡೆ ಸಿಲುಕಿದ್ದರಿಂದ ಪ್ರಯಾಣಿಕ ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ವಿಮಾನದ ಸಿಬ್ಬಂದಿ ವೈದ್ಯರನ್ನು ಕರೆಯಿಸಿ ತಪಾಸಣೆ ನಡೆಸಿದ್ದಾರೆ.
ದಕ್ಷಿಣದ ರಾಜ್ಯಗಳಿಗೆ ಅಯೋಧ್ಯೆ ಸಂಪರ್ಕ : ದಕ್ಷಿಣ ಭಾರತದ ರಾಮ ಭಕ್ತರಿಗೆ ಸಿಹಿ ಸುದ್ದಿ. ರಾಮಜನ್ಮಭೂಮಿ ಅಯೋಧ್ಯೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ನೇರ ವಿಮಾನ ಸಂಚಾರ ಆರಂಭವಾಗಲಿವೆ. ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣಕ್ಕೆ ಫೆಬ್ರವರಿ 1 ರಿಂದ ಸೇವೆ ಪ್ರಾರಂಭವಾಗಲಿದೆ. ಫೆಬ್ರವರಿ 2 ರಿಂದ ಅಯೋಧ್ಯೆ ಟು ಬೆಂಗಳೂರಿಗೆ ನೇರ ವಿಮಾನ ಸೇವೆ ಆರಂಭವಾಗಲಿದೆ. ಇವುಗಳ ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ.
ಚೆನ್ನೈ ಟು ಅಯೋಧ್ಯೆಗೆ ಪ್ರತಿ ಪ್ರಯಾಣಿಕರಿಗೆ 6200 ರೂಪಾಯಿ, ಬೆಂಗಳೂಟು - ಅಯೋಧ್ಯೆಗೆ 5,300 ರೂಪಾಯಿ ಟಿಕೆಟ್ ದರವಿದೆ. ಇದರ ಜೊತೆಗೆ ಅಯೋಧ್ಯೆಯಿಂದ ದೆಹಲಿ, ಅಹಮದಾಬಾದ್, ಮುಂಬೈ ಮತ್ತು ಕೋಲ್ಕತ್ತಾಗೆ ನೇರ ವಿಮಾನಗಳು ಪ್ರಾರಂಭವಾಗಿವೆ. ಪ್ರಯಾಣಿಕರು ಟಿಕೆಟ್ ಅನ್ನು ಯಾವುದೇ ಬುಕಿಂಗ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ಬುಕ್ ಮಾಡಬಹುದು.
ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ದೇಶದ ಮೂಲೆ ಮೂಲೆಗಳಿಂದ ರಾಮಭಕ್ತರು ಅಂದಿನ ಕಾರ್ಯಕ್ರಮಕ್ಕೆ ಬರಲಿದ್ದು, ವಿಮಾನಗಳ ಜೊತೆಗೆ ರೈಲುಗಳು ಕೂಡ ಸಂಚಾರ ಆರಂಭಿಸಲಿವೆ. ಬೆಂಗಳೂರಿನಿಂದ ಅಯೋಧ್ಯೆಗೆ 7 ರೈಲುಗಳು ಸಂಚರಿಸಲಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪ್ರಾಯಶ್ಚಿತ್ತ, ಕರ್ಮಕುಟಿ ಪೂಜೆಯೊಂದಿಗೆ ರಾಮಲಲ್ಲಾ ಪಟ್ಟಾಭಿಷೇಕದ ವಿಧಿವಿಧಾನ ಆರಂಭ